ಯೋಜನೆಗಳ ಸದುಪಯೋಗಕ್ಕೆ ಕರೆ


ಬ್ಯಾಡಗಿ,ಜ.10- ಮುಸ್ಲಿಂ ಸಮುದಾಯದ ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿಲ್ಲ. ಇದರಿಂದ ಈ ಸಮಾಜ ಶಿಕ್ಷಣದಿಂದ ದೂರ ಉಳಿಯುತ್ತಿರುವುದು ವಿಪರ್ಯಾಸದ ಸಂಗತಿ. ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಉನ್ನತ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದರು.
ಪಟ್ಟಣದ ಶಿವಪುರ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವರು ಕ್ಷೇತ್ರದಾದ್ಯಂತ ಶೈಕ್ಷಣಿಕ ರಂಗಕ್ಕೆ ತಾವು ಮೊದಲ ಪ್ರಾಶಸ್ತ್ಯವನ್ನು ನೀಡುವ ಮೂಲಕ ಶಾಲೆಗಳ ಸುಧಾರಣೆಯೊಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಕವಿತಾ ಸೊಪ್ಪಿನಮಠ, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಸದಸ್ಯರಾದ ಮಹಬೂಬಸಾಬ ಅಗಸನಹಳ್ಳಿ, ಶಂಕರ ಕುಸುಗೂರ, ಮುರಿಗೆಪ್ಪ ಶೆಟ್ಟರ, ಎಸ್.ಡಿಎಂಸಿ ಅಧ್ಯಕ್ಷ ಹಸನಸಾಬ್ ದರ್ವೇಶ್, ಎಇಇ ಸುರೇಂದ್ರ ದೊಡ್ಡಮನಿ, ಕಿರಿಯ ಅಭಿಯಂತರ ಆನಂದ ದೊಡ್ಡಮನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.