ಯೋಜನೆಗಳ ಯಶಸ್ವಿಗೆ ಸರ್ಕಾರಗಳ ಪಾತ್ರ ಬಹುಮುಖ್ಯ : ಶಾಸಕ ಹೆಚ್.ಪಿ.ಎಂ

ಹುಣಸೂರು, ನ.03: ಬಹುತೇಕ ಜನಪರ ಯೋಜನೆಗಳ ವೈಪಲ್ಯಕ್ಕೆ ಸರ್ಕಾರÀಗಳ ನಿರ್ವಹಣೆ ಕೊರತೆ ಪ್ರಮುಖ ಕಾರಣವಾಗಿರುವುದು ಬೇಸರದ ಸಂಗತಿ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಿಳಿಕೆರೆ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಮೈಸೂರು, ತಾಲ್ಲೂಕು ಪಂಚಾಯ್ತಿ ಹುಣಸೂರು, ಗ್ರಾಮ ಪಂಚಾಯ್ತಿ ಬಿಳಿಕೆರೆ ಹಾಗೂ ಐ.ಟಿ.ಸಿ ಮತ್ತು ಔಟ್‍ರೀಚ್ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ ಜಿಲ್ಲಾ ಮಟ್ಟದ ಸ್ವಚ್ಚೋತ್ಸವ-ನಿತ್ಯೋತ್ಸವ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸರ್ಕಾರಗಳು ಜನರಿಗಾಗಿ ಅಭಿವೃಧ್ಧಿ ಯೋಜನೆಗಳನ್ನು ರೂಪಿಸುವುದು ಮುಖ್ಯವಲ್ಲ, ಅದರ ಸಾಧಕ ಭಾಧಕಗಳ ಬಗ್ಗೆ ಮುಂದಾಲೋಚಿಸಿ ಅನುಷ್ಠಾನಗೊಳಿಸುವುದರ ಜೊತೆ ಸಂಬಂಧಿಸಿದ ಇಲಾಖೆಗಳಿಗೆ ಹಾಗೂ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸೂಕ್ತ ಅನುದಾನ ನೀಡಿದಾಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದರು.
ಕಸ ವಿಲೇವಾರಿ ವಿಚಾರದಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಸಂಬಂಧಿಸಿದಂತೆ ಅಜಾಗಜಾಂತರ ವ್ಯತ್ಯಾಸ ಇದ್ದು ನಗರ ಪ್ರದೇಶಗಳಲ್ಲಿ ವಾಣಿಜ್ಯ ವಹಿವಾಟುಗಳು ಹೆಚ್ಚು ಇರುವುದರಿಂದ ಸೇವಾಶುಲ್ಕ ಕ್ರೂಡಿಕರಣಕ್ಕೆ ಅಷ್ಟೇನೂ ಸಮಸ್ಯೆ ಕಾಡುವುದಿಲ,್ಲ ಆದರೆ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸೇವಾ ಶುಲ್ಕ ಸಂಗ್ರಹಿಸುವುದು ಕಷ್ಟವಾಗುವುದರಿಂದ ಸರ್ಕಾರಗಳೇ ಇದರ ನಿರ್ವಹಣೆ ಹೊತ್ತು ಅನುದಾನ ಬಿಡುಗಡೆಗೊಳಿಸಿದರೆ ಸೂಕ್ತ ಎಂದರು.
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸ್ವಚ್ಚತೆ ಎನ್ನುವುದು ಪ್ರತಿ ಹಂತದಲ್ಲೂ ಅನಿವಾರ್ಯವಿರುವುದರಿಂದ ಗ್ರಾಮಸ್ಥರು ಯಾರನ್ನು ಅವಲಂಭಿಸದೆ ಸ್ವಯಂ ಸ್ವಚ್ಚತೆ ಕಾಪಾಡಿಕೊಂಡರೆ ನಿಮ್ಮಗಳ ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ ಎಂದರು. ಸ್ವಚ್ಚತೆಯಲ್ಲಿ ಹೆಚ್ಚಾಗಿ ಮಹಿಳೆಯರೆ ಪಾಲ್ಗೋಳುವುದರಿಂದ ನಿಮ್ಮ ಕುಟುಂಬದ ಆರೋಗ್ಯದ ಜೊತೆ ಗ್ರಾಮದ ಸ್ವಚ್ಚತೆ ಕೂಡ ಇರಲಿರುವುದರಿಂದ ನಗರ ಪ್ರದೇಶದವರಿಗೆ ನೀವುಗಳು ಮಾದರಿಯಾಗಬೇಕಿದೆ ಎಂದರು.
ನಂತರ ಮಾತನಾಡಿದ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ ಪ್ಲಾಸ್ಟಿಕ್ ಎಂಬುದು ಮಾನವನ ಜೀವನದ ಪ್ರತಿ ಹಂತದಲ್ಲೂ ಹಾಸುಹೊಕ್ಕಾಗಿದ್ದು, ಇದರಿಂದ ಸಕಲ ಜೀವರಾಶಿಗೂ ಒಂದಲ್ಲಾ ಒಂದು ರೀತಿ ಕಂಟಕವಾಗಿದ್ದು ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿ ಹಿಂದಿನಂತೆ ಬಟ್ಟೆ ಬ್ಯಾಗ್‍ಗಳನ್ನು ಬಳಸಲು ಮುಂದಾದರೆ ಸ್ವಲ್ಪ ಮಟ್ಟಿಗಾದರೂ ಬದಲಾವಣೆ ತರಬಹುದು ಎಂದು ಅಭಿಪ್ರಾಯಪಟ್ಟ ಅವರು ಇಂದು ಗ್ರಾಮೀಣ ಭಾಗದಲ್ಲೂ ಪ್ಲಾಸ್ಟಿಕ್ ಹಾವಳಿಯಿಂದ ಜಲಮೂಲಗಳು ನಶಿಸುತ್ತಿರುವುದು ಗ್ರಾಮೀಣ ಜನ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ ಎಂದರು.
ನಂತರ ಮಾತನಾಡಿದ ಔಟ್‍ರೀಚ್ ಸಂಸ್ಥೆಯ ತರಬೇತಿ ಮುಖ್ಯಸ್ಥ ಜಿ.ಎಸ್.ಜಗದೀಶ್ ಮಾತನಾಡಿ ರಾಜ್ಯದ ಪ್ರತಿಯೊಂದು ಗ್ರಾಮವನ್ನು ತ್ಯಾಜ್ಯ ಮುಕ್ತ, ಸ್ವಚ್ಚ ಹಾಗೂ ಆರೋಗ್ಯಕರವಾಗಿಸುವ ಉದ್ದೇಶದಿಂದ ಕರ್ನಾಟಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸ್ವಚ್ಚ ಭಾರತ್ ಮೀಷನ್ ಯೋಜನೆಯಡ್ಡಿ ರಾಜ್ಯಾದ್ಯಾಂತ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಸ್ವಚ್ಚ ಸಂಕಿರ್ಣ ಹೆಸರಿಸಿ ಏಕರೂಪ ಬ್ರ್ಯಾಂಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಹಂತಹಂತವಾಗಿ ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲೂ ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಒಣ ಕಸಗಳಲ್ಲಿ ಬರುವ ವಿವಿಧ ಬಗ್ಗೆಯ ಕಸಗಳ ಬಗ್ಗೆ ಪ್ರ್ಯಾತ್ಯಕ್ಷಿಕೆ ಮುಖಾಂತರ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಪರಿಚಯಿಸಿ ಹಾಗೂ ಅದೇ ರೀತಿ ಹಸಿ ಕಸದಲ್ಲಿ ಹೇಗೆ ಸಾವಯವ ಗೊಬ್ಬರ ತಯಾರಿಸಿ ಕೃಷಿಗೆ ಬಳಸಬಹುದೆಂದು ತಿಳಿಸಿಕೊಟ್ಟ ಅವರು ಇದರಿಂದ ಆರೋಗ್ಯಪೂರ್ಣ ಆಹಾರ ದೊರುಕುವುದರ ಬಗ್ಗೆಯು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಮ್, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗ್ರಾಯಿತ್ರಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಪದ್ಮಮ್ಮ ಬಸವರಾಜು, ಉಪಾಧ್ಯಕ್ಷ ಪ್ರೇಮೇಗೌಡ, ತಾ.ಪಂ ಸದಸ್ಯ ರಾಜೇಶ್ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಗೂ ನೋಡಲ್ ಅಧಿಕಾರಿ ಎಂ.ಕೃಷ್ಣರಾಜ್, ತಾಪಂ ಇ.ಒ ಗೀರಿಶ್.ಹೆಚ್.ಡಿ, ಗ್ರಾ.ಪಂ ಆಡಾಳಿತಾಧಿಕಾರಿ ರಶ್ಮಿ, ಗ್ರಾಮ ಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಗ್ರಾಮ ಪಂ ಪಿ.ಡಿ.ಒ ರಾಘವೇಂದ್ರ ಪ್ರಸನ್ನ, ತಾಲ್ಲೂಕು ಸಂಜೀವಿನಿ ಒಕ್ಕೂಟದ ಸಂಯೋಜಕಿ ಮಂಜುಳ, ಉದ್ಯಮಿ ಮಧು ಹಾಗೂ ಔಟ್‍ರೀಚ್ ಸಂಸ್ಥೆಯ ಕೇತ್ರಸಂಯೋಜಕರುಗಳಾದ ಶಿವಣ್ಣ, ಪ್ರಶಾಂತ್ ಸೇರಿದಂತೆ ಇನೂರಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಹಾಗೂ ಸಂಜೀವಿನಿ ಮಹಿಳಾ ಸಂಘದ ಸದಸ್ಯರು ಹಾಜರಿದರು.