
ಭಾಲ್ಕಿ:ಮೇ.12:ಯೋಜನಾಬದ್ಧ ಓದು, ನಿರಂತರ ಪ್ರಯತ್ನ, ಶ್ರದ್ಧೆ, ಸಮಯ ಪರಿಪಾಲನೆ ಸಾಮಾನ್ಯ ವಿದ್ಯಾರ್ಥಿಯಿಂದಲೂ ಅಸಾಮಾನ್ಯ ಸಾಧನೆ ಮಾಡಿಸುತ್ತವೆ ಎಂದು ಹಲಬರ್ಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿತ್ರಿ ಪಾಟೀಲ ಹೇಳಿದರು.
ತಾಲ್ಲೂಕಿನ ತೇಗಂಪೂರ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90 ರಷ್ಟು ಅಂಕ ಪಡೆದು ಅರುಣೋದಯ ಪ್ರೌಢ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿರುವ
ಪ್ರಜ್ವಲ್ ಸುಭಾಷ ಪಾಟೀಲರನ್ನು ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರು ಹೇಳುವ ಪಾಠಗಳನ್ನು ಆಸಕ್ತಿಯಿಂದ ಆಲಿಸಿ, ನಿತ್ಯದ ಮನೆಗೆಲಸ ಅದೇ ದಿನ ಪೂರ್ತಿಗೊಳಿಸಬೇಕು. ಪ್ರತಿ ವಿಷಯಗಳನ್ನು ಆಳವಾಗಿ ಅಭ್ಯಸಿಸಿ ಏನು, ಏಕೆ, ಹೇಗೆ ಎಂಬ ಮಾದರಿಯಲ್ಲಿ ಕಲಿತ ವಿಷಯಗಳನ್ನು ಪ್ರಯೋಗಾತ್ಮಕ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು. ಅಂದಾಗ ಮಾತ್ರ ಪರೀಕ್ಷೆಯನ್ನು ನಿರ್ಭಿಡೆಯಾಗಿ ಬರೆದು ಮಹೋನ್ನತ ಸಾಧನೆ ಮಾಡಬಹುದು ಎಂದು ತಿಳಿ ಹೇಳಿದರು.
ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ನಮ್ಮ ಸಂಘದ ಹಳೇ ವಿದ್ಯಾರ್ಥಿ ಆಗಿರುವ ಸುಭಾಷ ಪಾಟೀಲರ ಮಗ ಉತ್ತಮ ಸಾಧನೆ ಮಾಡಿರುವುದು ನಮ್ಮ ಸಂಘಕ್ಕೂ, ಗ್ರಾಮಕ್ಕೂ ಹೆಮ್ಮೆ, ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಪ್ರೇಮ ಪ್ರಭಾ ಮಾತನಾಡಿ, ಪ್ರಜ್ವಲ್‍ನ ಸಹೋದರಿ ಅಕ್ಷತಾ, ಸಹೋದರ ಮಹಾದೇವ ಕೂಡಾ ಅರುಣೋದಯ ಶಾಲೆಗೆ ಕ್ರಮವಾಗಿ 2017, 2020ರಲ್ಲಿ ಶೇ.94, 96 ಪ್ರತಿಶತ ಅಂಕ ಪಡೆದು ವಿಶಿಷ್ಟ ಸಾಧನೆ ಮಾಡಿದ್ದರು ಎಂದು ಸ್ಮರಿಸಿದರು.
ಹಲಬರ್ಗಾ ಗ್ರಾಮ ಪಂಚಾಯತಿ ಸದಸ್ಯೆ ಕಾವೇರಿ ಪಾಟೀಲ, ಪಾಲಕರಾದ ಸುಭಾಷ, ರೇಣುಕಾ, ಪ್ರಮುಖರಾದ ವಿಜಯಕುಮಾರ ಬೀರಾದಾರ, ರೇವಣು ಪಾಟೀಲ, ಸೂರ್ಯಕಾಂತ ಪ್ರಕಾಶ ಪಾಟೀಲ, ಗೋಪಾಲ ಬಿರಾದಾರ, ನಂದುಕುಮಾರ, ಗೌರಮ್ಮ, ಅಕ್ಷತಾ ಸೇರಿದಂತೆ ಇತರರು ಇದ್ದರು.