ಯೋಜನಾಬದ್ದವಾಗಿ ಹಗಲು ರಾತ್ರಿ ಕೆಲಸ ಮಾಡಿ ಕೋವಿಡ್ ನಿಯಂತ್ರಿಸಿ: ಬೊಮ್ಮಾಯಿ

ಹಾವೇರಿ:ಮೇ.5: ತೀವ್ರ ಅಪಾಯಕಾರಿಯಾಗಿರುವ ಕೋವಿಡ್ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ ಹಗಲು ರಾತ್ರಿ ಕೆಲಸ ಮಾಡುವ ಮೂಲಕ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಗ್ಗಾವಿ ಮತ್ತು ಸವಣೂರು ತಾಲೂಕುಗಳ ಅಧಿಕಾರಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳಿಗೆ ಈ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ರಾಜ್ಯದಲ್ಲೆಡೆ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಆಕ್ಸಿಜನ್ ಕೊರತೆಯಿಂದ ರೋಗಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ತಾಲೂಕಿನಲ್ಲಿ ಶಿಗ್ಗಾವಿ ಮತ್ತು ಸವನೂರು ತಾಲೂಕುಗಳಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅವರು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾನೇ ಮುತುವರ್ಜಿವಹಿಸಿ 50 ಜಂಬು ಆಕ್ಸಿಜನ್ ಸಿಲಿಂಡರ್ ಗಳನ್ನು ಶಿಗ್ಗಾವಿ ಮತ್ತು ಸವಣೂರಿಗೆ ವಿತರಿಸುವ ವ್ಯವಸ್ಥೆ ಮಾಡಿದ್ದೇನೆ. ಆಕ್ಸಿಜನ್ ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ. ಯಾವ ರೋಗಿಗೆ ಎಷ್ಟು ಪ್ರಮಾಣದ ಆಮ್ಲಜನಕ ಅಗತ್ಯವಿದೆ ಎಂಬುದನ್ನು ಆಧರಿಸಿ ರೋಗಿಗೆ ಆಮ್ಲಜನಕ ನೀಡುವ ಮೂಲಕ ರೋಗಿಯನ್ನು ಅಪಾಯದಿಂದ ಪಾರು ಮಾಡಿ ಎಂದು ಸಚಿವರು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಹೇಳಿದರು.
ಸದ್ಯಕ್ಕೆ ಶಿಗ್ಗಾವಿಯಲ್ಲಿ 91 ಮತ್ತು ಸವಣೂರಿನಲ್ಲಿ 28 ಜಂಬೂ ಸಿಲಿಂಡರ್ ಗಳಿವೆ. ಅವುಗಳನ್ನು ಪ್ರತಿದಿನದ ಆಧಾರದ ಮೇಲೆ ಖಾಲಿಯಾದ ಸಿಲಿಂಡರ್ ಗಳನ್ನು ಭರ್ತಿ ಮಾಡಿಕೊಳ್ಳಬೇಕು. ಪ್ರತಿದಿನ ಮುಂಜಾನೆ ಮತ್ತೆ ಪೂರ್ಣಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್ ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಪ್ರತಿದಿನ ದಾಖಲಾಗುವ ಪ್ರಕರಣಗಳ ಬಗ್ಗೆ ಕೇಸ್ ಸ್ಟಡಿ ಮಾಡಿ. ಅದರ ಆಧಾರದ ಮೇಲೆ ಎಷ್ಟು ಜನ ರೋಗಿಗಳು ಆಸ್ಪತ್ರೆಗೆ ದಾಖಲಾಗಬಹುದು? ದಾಖಲಾದ ಎಷ್ಟು ರೋಗಿಗಳಿಗೆ ಆಕ್ಸಿಜನ್ ಬೇಕಾಗಬಹುದು ಎಂಬುದರ ಬಗ್ಗೆ ಫ್ಯೂಚರ್ ಪ್ಲಾನ್ ಮಾಡಿಟ್ಟುಕೊಳ್ಳಿ. ಸಾಕಷ್ಟು ಪ್ರಮಾಣದಲ್ಲಿ ರೆಮ್‍ಡಿಸಿವಿರ್ ಔಷಧಿಯನ್ನು ತರಿಸಿಕೊಳ್ಳಿ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಇಂಡೆಂಟ್ ಹಾಕಿ. ಒಟ್ಟಿನಲ್ಲಿ ಯೋಜನಾಬದ್ಧವಾಗಿ ಕೆಲಸ ನಿರ್ವಹಿಸಿದ್ಲರೆ ಶಿಗ್ಗಾವಿ ಮತ್ತು ಸವಣೂರಿನಲ್ಲಿ ಕೋವಿಡ್‍ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ ಎಂದು ಅವರು ಹೇಳಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೋಮ್ ಐಸೋಲೇಟ್ ಆಗಿರುವ ರೋಗಿಗಳನ್ನು ಪತ್ತೆ ಮಾಡಿ. ಅವರ ಮೇಲೆ ನಿಗಾ ಇರಿಸಿ. ಅವರ ಮನೆಯವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಿ. ಅವರ ಮನೆಯನ್ನು ಮಾತ್ರ ಕಂಟೇನಮೆಂಟ್ ಎಂದು ಘೋಷಿಸಿ ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನನ್ನ ಮುಂದೆ ಗುಬ್ಬಚ್ಚಿ ಕತೆ ಹೇಳಬೇಡಿ. ಹಗಲು ರಾತ್ರಿ ಕೆಲಸ ಮಾಡಿ. ಫ್ಯೂಚರ್ ಪ್ಲಾನ್ ಮಾಡಿ ಯೋಜನಾಬದ್ಧವಾಗಿ ಕೆಲಸ ಮಾಡಿ. ಶಿಗ್ಗಾವಿ ಮತ್ತು ಸವನೂರು ಪಟ್ಟಣಗಳನ್ನು ಶುಚಿಯಾಗಿರಿಸಿ. ನಾನು ಬಂದು ಶುಚಿತ್ವವನ್ನು ತಪಾಸಣೆ ಮಾಡುತ್ತೇನೆ. ಶುಚಿತ್ವದ ಕೊರತೆ ಉಂಟಾದರೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳನ್ನು ಅಮಾನತುಗೊಳಿಸುತ್ತೇನೆ ಎಂದು ಅವರು ಹೇಳಿದರು.