ಯೋಗ ಶಿಕ್ಷಣ ಸಂಸ್ಥೆ ಸಾಧಕರಿಂದ ೧೦೮ ಸೂರ್ಯನಮಸ್ಕಾರ ಪ್ರದರ್ಶನ

ಸಂಜೆವಾಣಿ ವಾರ್ತೆ

ಚಿರ್ತದುರ್ಗ :ಫೆ.16.ರಥಸಪ್ತಮಿ ದಿನದ ಅಂಗವಾಗಿ  ಜಿಲ್ಲೆಯಾದ್ಯಂತ ಸೂರ್ಯದೇವನಿಗೆ ವಿಶೇಷ ಪೂಜೆ, ಅಗ್ನಿಹೋತ್ರ, 108 ಸೂರ್ಯನಮಸ್ಕಾರಗಳೊಂದಿಗೆ ಅರ್ಘ್ಯವನ್ನು ಸಮರ್ಪಿಸಲಾಯಿತು. ಚಿತ್ರದುರ್ಗ ಆಯುಷ್ ಇಲಾಖೆ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಜಂಟಿಯಾಗಿ ನಗರದ ವೆಂಕಟೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಗ್ಗೆ 5 ಗಂಟೆಗೆ ಸರಿಯಾಗಿ ಅಗ್ನಿಹೋತ್ರ ಹೋಮದೊಂದಿಗೆ ಯೋಗ ಗುರು ರವಿ ಅಂಬೇಕರ್‌ ಮಾರ್ಗದರ್ಶನದಲ್ಲಿ ಹಲವಾರು ಯೋಗ ಸಾಧಕರಿಂದ 108 ಸೂರ್ಯನಮಸ್ಕಾರಗಳ ಪ್ರದರ್ಶನ ನೀಡಲಾಯಿತು, ನಂತರ ಸೂರ್ಯ ದೇವರಿಗೆ ಆರ್ಘ್ಯ ಸಮರ್ಪಣೆ ಮಾಡಲಾಯಿತು ನಂತರದಲ್ಲಿ ವೇದಿಕೆಯ ಕಾರ್ಯಕ್ರಮ ನೆರವೇರಿತು.ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಚಂದ್ರಕಾಂತ ಸಂ. ನಾಗಸಂದ್ರ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿಅನಾದಿ ಕಾಲದಿಂದಲೂ ಸೂರ್ಯನನ್ನು ಪೂಜಿಸುವ ವಾಡಿಕೆ ಭಾರತದಲ್ಲಿದೆ. ನಮ್ಮ ವೇದ ಉಪನಿಷತ್ತುಗಳಲ್ಲಿಯೂ ಸೂರ್ಯನ ಶಕ್ತಿಯ ಉಲ್ಲೇಖಗಳಿವೆ. ಸೂರ್ಯನ ಉದಯದಿಂದ ವಿಷಕಾರಿ ಕ್ರಿಮಿಗಳು ಸಾವನ್ನಪ್ಪುತ್ತವೆ. ಸೂರ್ಯನ ಕಿರಣಗಳು ಚಿಕಿತ್ಸೆಗೆ ಪೂರಕವಾಗಿವೆ ಎಂಬುದು ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿದೆ. ಈ ಸೂರ್ಯ ಚಿಕಿತ್ಸೆಯು ಆಯುಷ್ ಚಿಕಿತ್ಸಾ ಪದ್ಧತಿಯ ಒಂದು ಭಾಗವೆಂದು ಎಂದು ತಿಳಿಸಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಗಂಗಾಧರ ವರ್ಮರವರು ಮಾತನಾಡಿ ರಥಸಪ್ತಮಿಯಂದು ೧೦೮ ಬಾರಿ ಸೂರ್ಯನಮಸ್ಕಾರವನ್ನು ಮಾಡಿರುವುದು ಬಹಳಷ್ಟು ಒಳ್ಳೆಯ ಕಾರ್ಯ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಒಳ್ಳೆಯದು. ಸೂರ್ಯನ ತತ್ವ, ಉಪಾಸನೆ, ಆಚರಣೆಗಳ ಒಗ್ಗೂಡುವಿಕೆಯನ್ನು ಯೋಗದಲ್ಲಿ ಸೂರ್ಯ ನಮಸ್ಕಾರವೆಂದು ಕರೆಯುತ್ತಾರೆ. ಭಾರತೀಯ ಋಷಿ ಪರಂಪರೆಯು ನೀಡಿರುವ ಕೊಡುಗೆಗಳಲ್ಲಿ ಸೂರ್ಯ ನಮಸ್ಕಾರವೂ ಒಂದು. ಇದು ನಮ್ಮ ಋಷಿ-ಮುನಿಗಳು ಬಹು ಚಾತುರ್ಯದಿಂದ ದೇಹದ ಎಲ್ಲಾ ಭಾಗಗಳಿಗೂ ಅಂದರೆ ಅಂಗುಷ್ಠದಿಂದ ಹಿಡಿದು ಶಿರಸ್ಸಿನವರೆಗೆ ವ್ಯಾಯಾಮ ದೊರೆಯುವಂತೆ ಸಂಶೋಧನೆ ಮಾಡಿ ನೀಡಿರುವ ಯೋಗಾಭ್ಯಾಸದ ವಿಧಾನ, ಇದರ ಜೊತೆಯಲ್ಲಿ ಉದಯಿಸಿ ಬರುತ್ತಿರುವ ವಿಶ್ವಚೇತನನಾದ ಸೂರ್ಯದೇವನ ಮುಂದೆ ನಿಂತು ಬೀಜಾಕ್ಷರ ಮಂತ್ರ ಪಠಣ, ಉಪಾಸನೆ, ಸ್ತೋತ್ರ ಮಾಡುವುದರ ಮೂಲಕ ಸಾಧಕನಿಗೆ ಮನಸ್ಸಿನ ಮೇಲೆ ಹತೋಟಿ ಬರುವಂತೆ ಮಾಡುವುದರೊಂದಿಗೆ ಸೂರ್ಯ ನಮಸ್ಕಾರದ ಅಭ್ಯಾಸವು ದೇಹ ಮತ್ತು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬರು ಯೋಗ ಸಂಸ್ಕಾರವನ್ನು ಅಳವಡಿಸಿಕೊಂಡರೆ ಉತ್ತಮ ಪ್ರಜೆಯಾಗುವುದು ಮಾತ್ರವಲ್ಲದೆ ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯ ಎಂದರಲ್ಲದೆ ಮೂರು ಮುಖ್ಯವಾದ ಅಂಶಗಳನ್ನು ನಾವೆಲ್ಲರೂ ಆಚರಿಸಲೇಬೇಕು, ಅವುಗಳೆಂದರೆ ಭಗವಂತನಿಗೆ, ಋಷಿಮುನಿಗಳಿಗೆ ಮತ್ತು ಜನ್ಮ ನೀಡಿದ ತಂದೆ-ತಾಯಿಯರಿಗೆ ಯಾವಾಗಲೂ ಕೃತಜ್ಞರಾಗಿರುವುದು ಎಂದು ತಿಳಿಸಿದರು.