ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕ: ಶ್ರೀನಿವಾಸ

ಸಂಡೂರು:ಜ:10- ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ, ಅದನ್ನು ಕಲಿತ ಮತ್ತು ನಿರಂತರ ಅಭ್ಯಾಸದಲ್ಲಿರುವವರಿಗೆ ಯಾವುದೇ ರೋಗಗಳು ಅತನ ಬಳಿ ಸುಳಿಯಲಾರವು, ಅದ್ದರಿಂದ ಪ್ರತಿಯೊಬ್ಬರೂ ಸಹ ಈ ಯೋಗವನ್ನು ಕಲಿತುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ತರಬೇತುದಾರ ಶ್ರೀನಿವಾಸ ತುಮಟಿ ತಿಳಿಸಿದರು.
ಅವರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎನ್.ಎಸ್.ಎಸ್. 2 ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ಎನ್.ಎಸ್. ವಿದ್ಯಾರ್ಥಿಗಳ ಯೋಗ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಯೋಗ ಮಾಡುವವರು ಶಿಸ್ತನ್ನು ಮೊದಲು ರೂಢಿಸಿಕೊಳ್ಳಬೇಕು, ಯೋಗದ ಜೊತೆ ಜೊತೆಯಲ್ಲಿಯೇ ಆಹಾರ ಸೇವನೆಯ ಶಿಸ್ತು ಬರುತ್ತದೆ, ಇದರಿಂದ ಮನುಷ್ಯನ ಆರೋಗ್ಯ ಸುಧಾರಿಸಲು ಪ್ರಾರಂಭವಾಗಿವೈದ್ಯರಿಂದ ದೂರವಿರುತ್ತಾನೆ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಂಡರೆ ಅದು ಬದುಕಿನುದ್ದಕ್ಕೂ ಸಹ ಇರುತ್ತದೆ, ಅಲ್ಲದೆ ಸೇವೆ ಮಾಡುವ ಗುಣವನ್ನು ರೂಢಿಸಿಕೊಳ್ಳಲು ಯೋಗ ಸಹಕಾರಿ, ಕಾರಣ ಯೋಗದಿಂದ ತಾಳ್ಮೆ, ಸಹಕಾರ, ಸಹನೆ, ಉತ್ತಮ ಆರೋಗ್ಯ ವೃದ್ದಿಯಾಗುತ್ತವೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಯೋಗ ಕಲಿತುಕೊಳ್ಳಿ, ರೂಢಿಸಿಕೊಳ್ಳಿ, ನಿರಂತರ ಅಭ್ಯಾಸ ಮಾಡಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಎನ್.ಎಸ್. ಎಸ್. ಅಧಿಕಾರಿಗಳಾದ ಡಾ. ಚೌಡಪ್ಪ ಅವರು ಉಪಸ್ಥಿತರಿದ್ದು ವಿದ್ಯಾರ್ಥಿ ಜೀವನದಲ್ಲಿ ಸೇವೆ ಮಾಡುವ ಗುಣವನ್ನು ರೂಢಿಸಿಕೊಳ್ಳುವುದರ ಜೊತೆಗೆ ಆರೋಗ್ಯವಂತ ಪ್ರಜೆಗಳನ್ನಾಗಿಸಲು ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಮಹಿಳೆ, ಪುರುಷ ಎನ್ನುವ ಭೇದವಿಲ್ಲದೆ ಎಲ್ಲರೂ ಕಲಿತು ಆರೋಗ್ಯವಂತರಾಗಬೇಕು, ಎಲ್ಲಿ ಆರೋಗ್ಯವಂತ ದೇಹವಿರುತ್ತದೆ, ಅಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ, ಅಗ ಉತ್ತಮ ಕಾರ್ಯಗಳು ತಾನಾಗಿಯೇ ನಡೆಯುತ್ತವೆ ಎಮದರು.
ಅಧಿಕಾರಿಗಳಾದ ಬಸವರಾಜ, ಕ್ರೀಡಾ ಸಹಾಯಕ ನಿರ್ದೇಶಕರಾದ ಶಿವರಾಮ್ ರಾಗಿ, ಸಹಾಯಕ ಕೆ.ಪಾಪಯ್ಯ, ಡಾ. ನಾಗರಾಜ ಜರ್ಮಲಿ, ರಮೇಶ್ ರಾಯಚೂರು ತರಬೇತಿಯಲ್ಲಿ ಉಪಸ್ಥಿತರಿದ್ದರು.