ಯೋಗ, ಧ್ಯಾನ, ಶಾರೀರಿಕ ವ್ಯಾಯಾಮಗಳಿಂದ ದೈನಂದಿನ ಒತ್ತಡ ಕಡಿಮೆ: ಡಾ. ಪೂರ್ಣಿಮಾ

ಚಾಮರಾಜನಗರ, ನ.13- ಹಲವು ಪ್ರಶ್ನೆಗಳು, ಗೊಂದಲಗಳಿಗೆ ಮನಸ್ಸೇ ಕಾರಣವಾಗಿದ್ದು ಯೋಗ, ಧ್ಯಾನ ಹಾಗೂ ಶಾರೀರಿಕ ವ್ಯಾಯಾಮಗಳನ್ನು ಪ್ರತಿ ನಿತ್ಯ ಮಾಡುವ ಮೂಲಕ ದೈನಂದಿನ ಒತ್ತಡದ ಬದುಕನ್ನು ಕಡಿಮೆ ಮಾಡಬಹುದು ಎಂದು ಮನೋರೋಗ ತಜ್ಞರಾದ ಡಾ.ಪೂರ್ಣಿಮಾ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ವಕೀಲರ ಸಂಘ ಹಾಗೂ ಪದ್ಮ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರ ಇವರ ವತಿಯಿಂದ ಗೂಗಲ್ ಮೀಟ್ ಆಪ್ ಮೂಲಕ ನಗರದಲ್ಲಿ ಕಾನೂನು ಅರಿವು ಕಾರ್ಯಕ್ರಮ ಮತ್ತು ಮಾನಸಿಕ ಒತ್ತಡ ನಿರ್ವಹಣೆ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವರು ಮಾನಸಿಕ ಒತ್ತಡವನ್ನು ನಿರ್ವಹಿಸುವುದು ಹೇಗೆ ಎಂಬುದರ ಬಗ್ಗೆ ಮಾತನಾಡುತ್ತಾ, ಮಾಡುವ ಕೆಲಸವನ್ನು ಒತ್ತಡ ಎಂದು ತಿಳಿಯದೆ ಕರ್ತವ್ಯ ಎಂದು ಮುಕ್ತ ಮನಸ್ಸಿನಿಂದ ನಿರ್ವಹಿಸಬೇಕೆಂದು ಕರೆ ನೀಡಿದರು.
ಕಾನೂನು ಅರಿವು ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಚಾಮರಾಜನಗರ ಜಿಲ್ಲಾ ಕಾನೂನು ನ್ಯಾಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಜೆ.ವಿಶಾಲಾಕ್ಷಿ ಅವರು ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಆಸ್ತಿ ಹಕ್ಕುಗಳ ಬಗ್ಗೆ ತಿಳಿಸಿಕೊಟ್ಟರು. ಕಾನೂನಿನಡಿ ಪ್ರತಿಯೊಬ್ಬರ ಸಮಸ್ಯೆಗಳಿಗೂ ಪರಿಹಾರವಿದ್ದು, ಗೌರವಿಸಿ ತಿಳಿದುಕೊಳ್ಳುವ ಪ್ರಯತ್ನವನ್ನು ಪ್ರತಿಯೊಬ್ಬರು ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪದ್ಮ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಬಸವರಾಜು, ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ. ಸುರೇಶ್ ಇದ್ದರು.