ಯೋಗ-ಧ್ಯಾನದಿಂದ ಮಾನಸಿಕ ಶಾಂತಿ

ಕೊರಟಗೆರೆ, ಜೂ. ೨೪- ಯೋಗ ಮತ್ತು ಧ್ಯಾನ ಮನುಷ್ಯನಿಗೆ ಅವಶ್ಯಕ. ಯೋಗ ಮನುಷ್ಯನ ಮನಸಿಕ ಮತ್ತು ದೈಹಿಕ ಬದ್ದತೆ ಕಾಪಾಡಿಕೊಳ್ಳಲು ಸಹಕಾರಿ. ಹಾಗಾಗಿ ಮನುಷ್ಯ ದಿನನಿತ್ಯ ಯೋಗ ಮತ್ತು ಧ್ಯಾನ ಮಾಡಬೇಕು ಎಂದು ಜಿಲ್ಲಾ ಪತಂಜಲಿ ಯೋಗಾ ಶಿಕ್ಷಣ ಸಮಿತಿ ಸಂಚಾಲಕ ಗೋಪಿನಾಥ್ ತಿಳಿಸಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಔಷಧಿಗಳು ಸರಿಪಡಿಸಲಾಗದ ಕಾಯಿಲೆಗಳನ್ನು ಯೋಗ ಗುಣಪಡಿಸಿದೆ. ಯೋಗ, ಧ್ಯಾನದ ಮೂಲಕ ಮಾನಸಿಕ ಶಾಂತಿ ಮಾತ್ರವಲ್ಲದೆ ಸಮಾಜದ ಶಾಂತಿಯನ್ನೂ ಕಾಪಾಡಬಹುದು ಎಂದರು.
ತಾಲ್ಲೂಕು ಪತಂಜಲಿ ಶಿಕ್ಷಣ ಸಮಿತಿ ಸಂಚಾಲಕ ಮಂಜುನಾಥ್ ಮಾತನಾಡಿ, ವ್ಯಾಯಾಮ ಮಾಡಿದರೆ ದೇಹಕ್ಕೆ ಮಾತ್ರ ಪುಷ್ಠಿ ಸಿಗುತ್ತದೆ. ಯೋಗಾ ಮಾಡುವುದರಿಂದ ದೇಹದಲ್ಲಿರುವ ಎಲ್ಲ ರೋಗಗಳಿಗೂ ರಾಮಬಾಣವಾಗಿದೆ. ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಯೋಗಾಭ್ಯಾಸ ಅತ್ಯವಶ್ಯ ಅಂತಹವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯೋಗ ಪ್ರತಿಯೊಬ್ಬರ ಬದುಕಿನ ಭಾಗವಾಗಲಿ ಎಂದು ತಿಳಿಸಿದರು.
ಸಾಮೂಹಿಕ ಯೋಗಾ ಕಾರ್ಯಕ್ರಮದಲ್ಲಿ ಪ್ರಸಾದ್, ಜಿ.ಪಂ.ಮಾಜಿ ಸದಸ್ಯ ದಾಕ್ಷಯಿಣಿ ರಾಜಣ್ಣ, ವೀರಶೈವ ಮಹಿಳಾ ಸಂಘದ ಚಂದ್ರಕಲಾ ಲೋಕೇಶ್, ಮಂಜುಳಾ ಮಯೂರ ಗೋವಿಂದರಾಜು, ಪ್ರಾಂಶುಪಾಲ ಕೆ.ಎಸ್.ಈರಣ್ಣ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.