ಯೋಗ ಧ್ಯಾನದಿಂದ ಆರೋಗ್ಯ ಹಾಗೂ ಆಂತರಿಕ ಸೌಂದರ್ಯ ಹೆಚ್ಚಾಗುವುದು

(ಸಂಜೆವಾಣಿ ವಾರ್ತೆ)
ಭಾಲ್ಕಿ:ಭಾರತೀಯ ಶ್ರೇಷ್ಠ ಕೊಡುಗೆಯಲ್ಲಿ ಯೋಗವೂ ಒಂದು. ಇಡೀ ಜಗತ್ತನ್ನು ಭಾರತದತ್ತ ಆಕರ್ಷಿಸುತ್ತಿದೆ. ಯೋಗ ಮಾಡುವುದು ನಾವೆಲ್ಲರೂ ಮಾಡುತ್ತೇವೆ, ದಿನಾಲು ನಾವು ಬೇಗ ಏಳುವುದೇ ಯೋಗ. ನಡೆದುಕೊಂಡು ಬಂದು ಅಪ್ಪಗಳ ಪ್ರವಚನ ಕೇಳುವುದೇ ಮಹಾಯೋಗ. ಅದು ನಮ್ಮ ಮನಸ್ಸನ್ನು ಶುದ್ಧಗೊಳಿಸುತ್ತದೆ. ಅವರ ವಿಚಾರಗಳು ನಮ್ಮನ್ನು ಪವಿತ್ರಗೊಳಿಸುತ್ತದೆ, ಆ ಪವಿತ್ರ ಪರಿಶುದ್ಧವೇ ಯೋಗ.
ಪತಂಜಲಿ ಮಹರ್ಷಿ ಹೇಳುತ್ತಾರೆ ಯೋಗ ಯಾವುದು?
ಯೋಗಾಂಗ ಅನುಷ್ಠಾನ ಅಶುದ್ಧಿ ಕ್ಷಯೇ,
ಜ್ಞಾನ ದೀಪ್ತಿಹೀ ಆ ವಿವೇಕ ಖ್ಯಾತೆಹೆ.
ಯೋಗ ಅನುಷ್ಠಾನ ಮಾಡುವುದರಿಂದ ಎಲ್ಲಾ ಅಶುದ್ಧಿ ರೋಗಗಳು ಹೋಗುತ್ತವೆ, ಜ್ಞಾನದೀಪ್ತಿಯು ಆಧ್ಯಾತ್ಮಿಕ ಜ್ಞಾನದಿಂದ ಹೆಚ್ಚಾಗುತ್ತದೆ. ಆದ್ದರಿಂದ ಯೋಗ ಶ್ರೇಷ್ಠವಾದದ್ದು. ಒಂದು ದೀಪ ಪ್ರಕಾಶಮಾನವಾಗಿ ಬೆಳಗಬೇಕಾದರೆ ಹಣತೆಯೂ ಶುದ್ಧವಾಗಿರಬೇಕು, ಬತ್ತಿಯೂ ಶುದ್ಧವಾಗಿರಬೇಕು, ಎಣ್ಣೆಯು ಶುದ್ಧವಾಗಿರಬೇಕು, ಕಲಬೆರಕೆ ಯಾದರೆ ದೀಪ ಬೆಳಗುವುದಿಲ್ಲ. ಹಾಗೆಯೇ ಈ ಶರೀರ ಒಂದು ಹಣತೆ ಇದ್ದಹಾಗೆ ಮನಸ್ಸಿನ ರೂಪ ಎಣ್ಣೆ, ಉಸಿರಾಟ ಪ್ರಾಣ ಪಂಚವಾಯುಗಳ ರೂಪ ಬತ್ತಿ, ಯಾವುದು ಕಲಬೆರಕೆ ಆಗದೆ ಇದ್ದರೆ, ಶುದ್ಧವಾಗಿದ್ದರೆ ಜೀವಜ್ಯೋತಿ ಉಜ್ವಲವಾಗಿ ಬೆಳಗುತ್ತದೆ. ಯೋಗವೆಂದರೆ ಆ ಜ್ಯೋತಿಯನ್ನು ಶುದ್ಧಗೊಳಿಸುವುದು. ಬತ್ತಿ ಕಲಬೆರಕೆ ಯಾದರೆ, ಎಣ್ಣೆಯಲ್ಲಿ ಕಲಬೆರಕೆ ಇದ್ದರೆ, ಅದನ್ನೆಲ್ಲಾ ತೆಗೆದು ಜ್ಯೋತಿಯನ್ನು ಬೆಳಗಿಸುವ ಮಾರ್ಗವೇ ಯೋಗ. ಯಾರು ಮನಸ್ಸಿನಿಂದ ಶುದ್ಧವಾಗಿರುವರು ಅವರೇ ಮಹಾತ್ಮರು. ಕಂಪ್ಯೂಟರ್ಗೆ ತುಂಬಾ ಜ್ಞಾನವಿದೆ ಆದರೆ ಅದನ್ನು ಜ್ಞಾನಿ ಅನ್ನುವುದಿಲ್ಲ, ಯಂತ್ರಗಳಿಗೆ ತುಂಬಾ ಶಕ್ತಿ ಇದೆ ಆದರೆ ಅದನ್ನು ಮಹಾತ್ಮ ಎನ್ನುವುದಿಲ್ಲ, ಅದನ್ನೇ ಶರಣರು ಹೇಳಿದರು ಯಾರ ಮನಸ್ಸು ಶುದ್ಧವಾಗಿರುತ್ತದೆಯೋ ಅವರೇ ಮಹಾತ್ಮರು. ಯಾವುದು ಮನಸ್ಸನ್ನು ಶುದ್ಧ ಮಾಡುವುದು, ಆನಂದ ಗೊಳಿಸುವುದು ಅದುವೇ ಯೋಗ.
ಉದಾಹರಣೆಗೆ ಮನೆ ಸ್ವಚ್ಛ, ಸುಂದರವಾಗಿದ್ದರೆ ನಮ್ಮ ಮನಸ್ಸು ಸಹ ಶಾಂತ ಸಂತೋಷ ಸಮಾಧಾನವಿರುತ್ತದೆ, ಮನೆ ಸಣ್ಣದು ದೊಡ್ಡದು ಎನ್ನುವ ಭಾವವಿಲ್ಲ, ಆದರೆ ಮನೆ ದೊಡ್ಡದಿದ್ದರೂ ಎಲ್ಲಾ ಸೌಕರ್ಯಗಳು ಮನೆಯಲ್ಲಿದ್ದರೂ ಸ್ವಚ್ಛಗೊಳಿಸದೆ ಇದ್ದರೆ ಅಲ್ಲಿ ಶಾಂತಿ ಇರುವುದಿಲ್ಲ, ಆನಂದ ಸಿಗುವುದಿಲ್ಲ.
ಆದರೆ ಒಂದು ನೂರು ರೂಪಾಯಿಯ ಕಸಬರಿಗೆ ತೆಗೆದುಕೊಂಡು ಆ ಮನೆಯನ್ನು ಸ್ವಚ್ಛಗೊಳಿಸಿದರೆ ಆ ಮನೆಗೆ ಶೋಭೆ ಬರುತ್ತದೆ ಅಲ್ಲಿ ಆನಂದ ಮನೆಮಾಡುತ್ತದೆ, ಹಾಗೆಯೇ ನಮ್ಮ ಶರೀರ ದೇಹ ಇದನ್ನು ನಾವು ಶಾಂತವಾಗಿರಬೇಕು ಸ್ವಚ್ಛವಾಗಿರಿಸಬೇಕು. ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಳಸವಯ್ಯಾ. ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
ಬಸವಣ್ಣನವರು ಹೇಳುತ್ತಾರೆ ಈ ದೇಹವೇ ದೇಗುಲ ಎನ್ನ ಕಾಲೇ ಕಂಬ ಎಂದು ಆದ್ದರಿಂದ ಈ ಮನೆಯನ್ನು ಸ್ವಚ್ಛಗೊಳಿಸಬೇಕು ಈ ಸತ್ಸಂಗ ಯೋಗ ಮನೆಯನ್ನು ಸ್ವಚ್ಛಗೊಳಿಸುತ್ತದೆ. ಕಸಬರಿಗೆಯ ಕಿಮ್ಮತ್ತು
ಕಡಿಮೆ ಇರಬಹುದು ಆದರೆ ಮಹತ್ವ ದೊಡ್ಡದು, ಹಾಗೆಯೇ ಯೋಗವು ಸಹ ನಮ್ಮ ದೇಹವನ್ನು ಸುಂದರಗೊಳಿಸುತ್ತದೆ. ಪತಂಜಲಿ ಗುರುಗಳು ಹೇಳುತ್ತಾರೆ ಯೋಗ ನಮ್ಮ ದೇಹವನ್ನು ಡಿಟಾಕ್ಸ್ ಮಾಡುತ್ತದೆ ಎಂದು, ಆವಾಗ ದೇಹ ಶುದ್ಧವಾಗುತ್ತದೆ.
ಹಾಗೆಯೇ ನಮ್ಮ ಶರೀರ ಕಲ್ಮಶ ವಾಗಿರದಿದ್ದರೆ ಅದು ಶುದ್ಧ ಶರೀರ.
ಯಾಕೆ ಯೋಗ?.
ಆಸನದಿಂದ ದೇಹಶುದ್ದಿ,
ಪ್ರಾಣಾಯಾಮದಿಂದ ವಾಯುಗಳು ಶುದ್ಧಿ, ಧ್ಯಾನ ಧಾರಣದಿಂದ ಮನಸ್ಸಿನ ಶುದ್ಧಿ,
ಆದ್ದರಿಂದ ಯೋಗ ಬಹಳ ಮಹತ್ವದ್ದು.
ರೋಗ: ಮನುಷ್ಯನಿಗೆ ಅನಾರೋಗ್ಯ ಬರುತ್ತದೆ ಎಂದರೆ ಈ ದೇಹವನ್ನು ಶುಚಿ ಗೊಳಿಸಲಿಕ್ಕೆ ರೋಗ ಬರುವುದು! ಈ ಶರೀರ ತುಂಬಾ ಸೂಕ್ಷ್ಮ ಅದು ದೇಹವನ್ನು ಶುದ್ಧವಾಗಿಡಲು ಪ್ರಯತ್ನಿಸುತ್ತದೆ. ನಾವು ಎಲ್ಲವನ್ನೂ ಈ ದೇಹಕ್ಕೆ ಹಾಕಿ ಡಸ್ಟ್ಬಿನ್ ಮಾಡಿರುತ್ತೇವೆ, ಆವಾಗ ನಮ್ಮ ಶರೀರ ದೀಪಾವಳಿಯಲ್ಲಿ ಮನೆ ಶುಚಿ ಮಾಡಿದಂತೆ ನಮ್ಮ ದೇಹಶುದ್ದಿ ಮಾಡುತ್ತದೆ, ನಾವು ಸಹಕಾರ ಮಾಡಿದರೆ ದೇಹ ಶುದ್ಧಗೊಳ್ಳುತ್ತದೆ ಇಲ್ಲದಿದ್ದರೆ ಇನ್ನಷ್ಟು ಹೊಲಸು ಹೆಚ್ಚಾಗುವುದು. ರೋಗ ಬರುವುದೇ ಅಶುದ್ಧತನದಿಂದ. ನಮ್ಮ ದೇಹ ಎಷ್ಟು ಶುದ್ಧವಾಗಿರುವುದು ಅಷ್ಟು ನಾವು ರೋಗದಿಂದ ಮುಕ್ತರಾಗುತ್ತೇವೆ. ಆದ್ದರಿಂದ ಆಸನಗಳನ್ನು ಮಾಡುವುದು, ಅಲ್ಲಿನ ಹೊಲಸನ್ನು ಹೊರಹಾಕುವುದು, ಹೊಟ್ಟೆ ಸ್ವಚ್ಛಮಾಡುವುದು. ಪ್ರಾಣಾಯಾಮ ಗಾಳಿ,ವಾಯು ಸ್ವಚ್ಛಮಾಡುವುದು
ಶುದ್ಧ ಗಾಳಿಯನ್ನು ತೆಗೆದುಕೊಳ್ಳುವುದು ಅಶುದ್ಧ ಗಾಳಿಯನ್ನು ಹೊರಹಾಕುವುದು. ಅದುವೇ ಪ್ರಾಣಾಯಾಮ ಅದನ್ನು ಯಾರು ಸಾಧಿಸುತ್ತಾರೆ ಅವರೇ ದೇವಮಾನವನ ಆಗುವರು.
ದೇವತುಲ್ಯೋ ಭವೇ ನರಃ
ಅಧಾಧೋ ಸಂಪ್ರವಕ್ಷಾಮಿಂ
ಪ್ರಾಣಾಯಾಮಸ್ಯ ಸದ್ವಿಧಿ,…
ಹೇಗೆ ನೀರಿನಿಂದ ದೇಹ ಶುದ್ಧವಾಗುವುದು ಹಾಗೆ ಪ್ರಾಣಾಯಾಮದಿಂದ ಮನುಷ್ಯ ನ ಮನಸ್ಸು ಶುದ್ಧಿಯಾಗುವುದು.
ಒಂದು ವಾಹನಕ್ಕೆ ಹೇಗೆ ಇಂಡಿಕೇಟರ್ ಮುಖ್ಯವೋ ಯಾವಕಡೆ ಹೋಗಬೇಕು ಎನ್ನುವ ಫಲಕದಂತೆ ಕಾರ್ಯ ಮಾಡುವುದು ಹಾಗೆಯೇ ನಮಗೆ ಪ್ರಾಣಾಯಾಮ ಇದು ನಮ್ಮ ಶರೀರವನ್ನು ವಾತ ಪಿತ್ತ ಕಫ ಇವುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಅವುಗಳನ್ನು ಸ್ವಚ್ಛಗೊಳಿಸಬಹುದು, ಇದು ಉಸಿರಾಟ ಕ್ರಿಯೆ ಮಾಡುತ್ತದೆ. ಊಟವಾದ ಬಳಿಕ ಬಲಗೈ ಮೇಲೆ ಇಟ್ಟು ಮಲಗಬೇಕು ಎಂದು ಸರ್ವಜ್ಞ ಹೇಳುತ್ತಾರೆ. ಹಾಗೆ ಮಲಗುವುದರಿಂದ ಅನ್ನ ಪಚನವಾಗುವುದು. ಹೇಗೆಂದರೆ ನಮ್ಮ ಮೂಗಿನ ಬಲ ಹೊರಳಿ ನಿಂದ ಗಾಳಿ ದೇಹಕ್ಕೆ ಸೇರುತ್ತದೆ. ಬಲ ಹೊರಳು ಸೂರ್ಯನಾಡಿ ಯಾಗಿ ಎಡ ಹೊರಳು ಚಂದ್ರನಾಡಿಯಾಗಿ ಕಾರ್ಯನಿರ್ವಹಿಸುತ್ತವೆ. ಬಲ ಹೊರಳು ದೇಹವನ್ನು ಬಿಸಿಯಾಗಿಡುತ್ತದೆ, ಎಡ ಹೊರಳು ದೇಹವನ್ನು ತಂಪಾಗಿಸುತ್ತದೆ. ಹೀಗಾಗಿ ದೇಹ ಬಿಸಿಯಾಗುವುದು ಅನ್ನ ಬೇಗ ಪಚನವಾಗುವುದು.
ಮಂಡೆ ಮಾಸಿದಡೆ ಮಹಾ ಮಜ್ಜನವ ಮಾಡುವುದು,
ವಸ್ತ್ರ ಮಾಸಿದಡೆ ಮಡಿವಾಳರಿಗಿಕ್ಕುವುದು,
ಮನದ ಮೈಲಿಗೆ ತೊಳೆಯಬೇಕಾದರೆ
ಕೂಡಲ ಚೆನ್ನ ಸಂಗಯ್ಯನ ಶರಣ ಅನುಭಾವವ ಮಾಡುವುದು.
ತಲೆ ಮಾಸಿದರೆ ಶಾಂಪೂ ಹಾಕಿ ಸ್ನಾನ ಮಾಡಿದರೆ ಧೂಳು ಎಲ್ಲಾ ಹೋಗಿ ಮತ್ತೆ ಶುಚಿ ಆಗುತ್ತದೆ.
ಅದೇ ರೀತಿ ಬಟ್ಟೆ ಮಾಸಿದರೆ ಮಡಿವಾಳರಿಗೆ ಕೊಟ್ಟರೆ ಡಿಟಜೆರ್ಂಟ್ ಹಾಕಿ ಅವರು ಚೆನ್ನಾಗಿ ತೊಳೆದು ಕೊಡುತ್ತಾರೆ. ಆದರೆ ನಮ್ಮ ಮನಸ್ಸಿನಲ್ಲಿರುವ ಕೊಳೆಯನ್ನು ಅಂದರೆ ಚಂಚಲವಾದ ನಮ್ಮ ಮನಸ್ಸಿನ ಕೆಟ್ಟ ಆಲೋಚನೆಗಳು, ತೊಳೆಯಬೇಕಾದರೆ ನಾವು ಕೂಡಲ ಚೆನ್ನಸಂಗಯ್ಯನ ಶರಣ ಸಂಗವ ಮಾಡಬೇಕು.
ಅದಕ್ಕೆ ಡಿಟಜೆರ್ಂಟ್ ಇಲ್ಲ ಶರಣರ ಸಾನಿಧ್ಯದಿಂದ ಅದು ಸಾಧ್ಯ.
ಯಮ, ನಿಯಮ ಮತ್ತು ಆಸನ
ಷಟ್ ಕ್ರಿಯಾ – ಶುದ್ಧೀಕರಣ ತಂತ್ರಗಳು
ನೇತಿ – ನಾಸಲ್ ಪ್ಯಾಸೇಜ್ ಶುದ್ಧೀಕರಣ ತಂತ್ರ,
ಧೌತಿ – ಜೀಣಾರ್ಂಗಗಳ ಶುದ್ಧೀಕರಣ,
ಕಪಾಲ್ ಭಾತಿ – ಇದನ್ನು ತಲೆಬುರುಡೆ ಹೊಳೆಯುವ ಉಸಿರು ಎಂದು ಕರೆಯಲಾಗುತ್ತದೆ. ಉಸಿರಾಟವು ನಿಷ್ಕ್ರಿಯವಾಗಿದೆ ಮತ್ತು ಹೊರಹಾಕುವಿಕೆಯು ಬಲವಂತವಾಗಿದೆ,
ತ್ರಾಟಕ – ಕಣ್ಣುಗಳನ್ನು ಶುದ್ಧೀಕರಿಸಲು ಮೇಣದಬತ್ತಿಯ ಜ್ವಾಲೆಯ ತೀವ್ರ ನೋಟ.
ಬಸ್ತಿ – ಕರುಳಿನ ಶುದ್ಧೀಕರಣ
ನೌಲಿ – ಕಿಬ್ಬೊಟ್ಟೆಯ ಮಂಥನ.

 1. ಪ್ರಾಣಾಯಾಮ – ಉಸಿರಾಟದ ನಿಯಂತ್ರಣ
 2. ಬಂಧಗಳು – ಶಕ್ತಿ ಲಾಕ್
 3. ಮುದ್ರೆಗಳು – ಅತೀಂದ್ರಿಯ ಸನ್ನೆಗಳು
 4. & ಸಮಾಧಿ.
  ಇವೆಲ್ಲವುಗಳು ಮಾಡುವುದರಿಂದ ನಮ್ಮ ಶರೀರ ಸ್ವಚ್ಛಗೊಳ್ಳುತ್ತದೆ. ನಮ್ಮ ದೇಹ ಶುದ್ಧವಾಗಿದೆ.
  ನಮ್ಮ ಶರೀರ ಅಶುದ್ಧವಾಗಿದೆ ಎಂಬುದು ನಮಗೆ ಗೊತ್ತಾಗುವುದು, ಬೊಜ್ಜು ಬಂದರೆ ಅನಾರೋಗ್ಯ, ಹೊಟ್ಟೆ ಎದೆ ಭಾಗದಂತೆ ಸಮತೋಲನವಾಗಿದ್ದರೆ ನಾವು ಆರೋಗ್ಯವಾಗಿದ್ದೇವೆ ಎಂದರ್ಥ.
  ನಮ್ಮ ಮುಖ ನಮಗೆ ಕಾಣಬೇಕಾದರೆ ಕನ್ನಡಿ ಸ್ವಚ್ಛವಾಗಿರಬೇಕು ಅದು ಕನ್ನಡಿ ಸ್ವಚ್ಛವಾಗಿರದೇ ಇದ್ದರೆ ನಮ್ಮ ಮುಖ ನಮಗೆ ಸ್ವಚ್ಛವಾಗಿ ಕಾಣುವುದಿಲ್ಲ ಹಾಗೆಯೇ ನಮ್ಮ
  ಮನಸ್ಸು ಸ್ವಚ್ಛವಾಗಿರಬೇಕು. ಅದು ಹೊಲಸಾಗುವುದರಿಂದ ನಾವು ಹೇಗೆಗೋ ಕಾಣುತ್ತೇವೆ, ನಾವು ಕುರೂಪಿಯಾಗಿ ಕಾಣುತ್ತೇವೆ, ನಾವು ಸುರೂಪಿಯಾಗಿ ಕಾಣುತ್ತಿದ್ದೇವೆ.
  ಈಗ ನಾವು ಮಾಡಬೇಕಾದ ಸಾಧನೆ ಏನೆಂದರೆ ಮನಸ್ಸೆಂಬ ಕನ್ನಡಿಯನ್ನು ಸ್ವಚ್ಛಗೊಳಿಸಬೇಕು, ಅದು ಯಾವಾಗ ಸ್ವಚ್ಛವಾಗುವುದು ಆವಾಗ ನಮ್ಮ ನಿಜವಾದ ಸ್ವರೂಪ ನಮ್ಮ ಅರಿವಿಗೆ ಬರುವುದು.
  ಅದಕ್ಕೆ ಅರಿದಡೆ ಶರಣ ಮರೆದಡೆ ಮಾನವ ಎಂಬ ಶರಣರ ವಾಕ್ಯ ನಮಗೆ ಕಾಣುವುದು, ಕನ್ನಡಿ ಅದು ನಮಗೆ ತೋರುತ್ತದೆ. ಯೋಗ ಈ ಶುದ್ಧ ಕ್ರಿಯೆಯನ್ನು ಮಾಡುವುದು. ಪ್ರಾಣಾಯಾಮ ಯೋಗ ಧ್ಯಾನ ಇವೆಲ್ಲವೂ ಕಲ್ಮಶಗಳನ್ನು ತೆಗೆದುಹಾಕುವ ಕ್ರಿಯೆ.
  ನಾವು ಹುಟ್ಟುವಾಗ ಶುದ್ಧವಾಗಿಯೆ ಇದ್ದೆವು ಆದರೆ ಕಲ್ಮಶವು ನಮ್ಮಲ್ಲಿ ಇಲ್ಲಿ ಬಂದ ಮೇಲೆ ಕೂಡಿಕೊಂಡಿತು, ಆದ್ದರಿಂದ ನಾವು ಹೇಗೆಗೋ ಏನೇನೋ ಆಗಿದ್ದೇವೆ ಮತ್ತೆ ಅದನ್ನೆಲ್ಲಾ ಸ್ವಚ್ಛ ಮಾಡುವುದೇ ನಿಜವಾದ ಸಾಧನೆ.
  ಹೇಗೆ ಆಕಾಶದಿಂದ ನೀರು ಭೂಮಿಗೆ ಬೀಳುವುದು. ಶುದ್ಧ ನೀರು ಇಲ್ಲಿ ಬಂದು ಕಲ್ಲು ಕಸ ಮಣ್ಣುಗಳಲ್ಲಿ ಕೂಡಿರುವುದರಿಂದ ಹೊಲಸಾಗಿದೆ. ಆವಾಗ ಸೂರ್ಯ ಬಂದು ನೀರನ್ನು ಆವಿ ಮಾಡಿ ಮೇಲೆ ಒಯ್ದು ಪರಿಶುದ್ಧ ಮಾಡಿ ಮತ್ತೆ ಭೂಮಿಗೆ ನೀರು ಬಿಡುವನು. ಹಾಗೆಯೇ ಗುರುವೆಂಬ ಸೂರ್ಯನು ಜ್ಞಾನವನ್ನು ಹೊತ್ತುಕೊಂಡು ಬಂದು, ನಾವು ಯಾರ್ಯಾರದೋ ಸಂಗದಲ್ಲಿ ಸೇರಿ ನಾವು ಹೊಲಸಾಗಿರುವುದನ್ನು, ನಮ್ಮನ್ನು ಶುಚಿಗೊಳಿಸುವನು. ನಮ್ಮನ್ನು ಪರಮಪಾವನರನ್ನಾಗಿ ಮಾಡುವನು.
  ಅದಕ್ಕೆ ರೈತರು ಹೇಳುತ್ತಾರೆ ಬೀಜ ಎಷ್ಟೇ ಚೆನ್ನಾಗಿರಲಿ, ಭೂಮಿಯಷ್ಟೇ ಫಲವತ್ತಾಗಿರಲಿ, ಹೊಲದಲ್ಲಿ ಕಸ ಜಾಸ್ತಿ ಇದ್ದರೆ, ಬೆಳೆಗಿಂತ ಕಳೆ ಜಾಸ್ತಿ ಇದ್ದರೆ ಭೂಮಿಯಿಂದ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಭೂಮಿ ಚೆನ್ನಾಗಿದ್ದರೂ ಬೆಳೆ ಬರುವುದಿಲ್ಲ ನಾವು ಕಸವನ್ನು ತೆಗೆದರೆ ಬೆಳೆ ಚೆನ್ನಾಗಿ ಬರುತ್ತದೆ.
  ಬೆಳೆವ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ, ತಿಳಿಯಲೀಯದು ಎಚ್ಚರಲೀಯದು ಎನ್ನ ಅವಗುಣಗಳ ಕಸವ ಕಿತ್ತು ಸಲಹಯ್ಯ ಲಿಂಗತಂದೆ, ಸುಳಿದೆಗೆದು ಬೆಳೆವೆನು.
  ಎಂದರೆ ದೇವರೇ ನೀನು ನನಗೆ ಏನನ್ನು ಮಾಡಬೇಡ, ನನ್ನಲ್ಲಿರುವ ಕಷ್ಮಲಗಳನ್ನು ಅವಗುಣಗಳನ್ನು ಕಸವನ್ನು ತೆಗೆದು ಹಾಕು ಸಾಕು. ನಾನು ಸುಳಿ ತೆಗೆದು ಬದುಕುವೆನು. ಯೋಗ ಆ ಕೆಲಸವನ್ನು ಮಾಡುತ್ತದೆ, ಆ ಕಸವನ್ನು ತೆಗೆದುಹಾಕುತ್ತದೆ.
  ಜಗತ್ತೇ ಕೊಂಡಾಡುವಂಥ ಸಾಮಥ್ರ್ಯ ಯೋಗಕ್ಕಿದೆ, ಸಾವಿರಾರು ವರ್ಷಗಳಿಂದ ಯೋಗ ಮಾಡಿಕೊಂಡು ಭಾರತೀಯರು ಬಂದಿದ್ದಾರೆ ಯೋಗದ ಮಹತ್ವ ಅಷ್ಟು. ಎಲ್ಲಾ ರೋಗಗಳಿಗೆ ಅಶುದ್ಧಿಯೇ ಕಾರಣ,
  ಎಲ್ಲಿ ಹೋಲಸಿರುವುದು ಅಲ್ಲಿ ರೋಗ,
  ಎಲ್ಲಿ ಹೊಲಸಿರುವುದು ಅಲ್ಲಿ ಅಶಾಂತಿ,
  ಎಲ್ಲಿ ಸ್ವಚ್ಛತೆ ಇರುವುದು ಅಲ್ಲಿ ಆರೋಗ್ಯ, ಎಲ್ಲಿ ಸ್ವಚ್ಛತೆ ಇರುವುದು ಅಲ್ಲಿ ಶಾಂತಿ ಇರುತ್ತದೆ.
  ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ
  ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
  ಎಂಬ ವಚನದಲ್ಲಿ ಈ ತನುವಿನಲ್ಲಿ ಹುಸಿ ತುಂಬಿತ್ತು ಮನಸ್ಸಿನಲ್ಲಿ ವಿಷ ತುಂಬಿತ್ತು ಎಂದರೆ ಈ ಮನೆಯಲ್ಲಿ ಯಜಮಾನ ಇಲ್ಲ ಎಂದು ಮನೆಹಾಳು ಬಿದ್ದಿದೆ ಎಂದು ಅರ್ಥ. ನಾವು ಸ್ನಾನ ಮಾಡುವೆವು ಬಟ್ಟೆ ತೊಡುವುದು, ಗಂಧ ಹಚ್ಚುವೇವು ಇವು ನಮ್ಮ ಹೊರಗಿನ ಸೌಂದರ್ಯ, ಯೋಗ ಧ್ಯಾನ ಪ್ರಾಣಾಯಾಮ ಇವುಗಳಿಂದ ಆಂತರಿಕ ಸೌಂದರ್ಯ ಹೆಚ್ಚಾಗುವುದು.

*ಸಂಗ್ರಹ: ಸಿದ್ದಲಿಂಗ ಎಸ್. ಸ್ವಾಮಿ ಉಚ್ಚಾ ತಾ. ಭಾಲ್ಕಿ ಜಿ. ಬೀದರ.