ಯೋಗ ದೈಹಿಕ ಮಾನಸಿಕ ಆರೋಗ್ಯ ಸದೃಢಕ್ಕೆ ಸಹಕಾರಿ: ಮಹಾದೇವ ಮುರಗಿ

ವಿಜಯಪುರ :ಜೂ.21: ಅನುದಿನವೂ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢಗೊಳಿಸಲು ಸಹಕಾರಿಯಾಗಿದ್ದು, ಜೀವನದ ಕ್ರಮವಾಗಿ ಅನುಸರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿ ಹೇಳಿದರು.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಯೋಗ ನಡಿಗೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
2023ರ ಯೋಗ ಕಾರ್ಯಕ್ರಮದ ಘೋಷ ವಾಕ್ಯ ವಸುದೈವ ಕುಟುಂಬಕ್ಕಾಗಿ ಯೋಗ ಮತ್ತು ಪ್ರತಿ ಮನೆ ಅಂಗಳ ಯೋಗಮಯ ಎಂಬ ಘೋಷ ವಾಕ್ಯದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಜೂನ್ 21ರ ಬುಧವಾರ ನಗರದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.
ಯೋಗ ನಡಿಗೆ ಜಾಥಾ: ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಯೋಗ ಜಾಥಾವು ಗಾಂಧಿಚೌಕ, ಬಸವೇಶ್ವರ ವೃತ್ತ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಮಾವೇಶಗೊಂಡಿತು.
ಘೋಷ ವಾಕ್ಯ: ‘ಪ್ರತಿ ಅಂಗಳದಲ್ಲಿ ಯೋಗ’ ಎಂಬ ಗುರಿಯೊಂದಿಗೆ ಯೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತ ಯೋಗ ನಡಿಗೆ ಆರೋಗ್ಯದೆಡೆಗೆ, ಯೋಗಕ್ಕೆ ಬನ್ನಿ ರೋಗ ಇಲ್ಲ ಎನ್ನಿ, ಸ್ವಾಸ್ಥ್ಯ ಸಾಧನೆಗೆ ಯೋಗಾಯುರ್ವೇದ, ಬಾರದಿರಲು ರೋಗ ಮಾಡಿರಿ ಯೋಗ, ಆತ್ಮದ ಮೇಲೆ ಪ್ರೀತಿ ಇದೆಯೇ ಧ್ಯಾನ ಮಾಡಿ, ಇದೇ ಯೋಗ ಸಾರ, ಎಂಬ ಇತ್ಯಾದಿ ಯೋಗದ ಬಗೆಗಿನ ಘೋಷವಾಕ್ಯಗಳು ರಸ್ತೆಯುದ್ದಕ್ಕೂ ಹೇಳಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಆರ್.ಎಸ್.ಪಾಟೀಲ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಜಿ.ಲೋಣಿ, ವೈದ್ಯಾಧಿಕಾರಿ ಡಾ.ಬಸವರಾಜ ವಗದುರ್ಗಿ, ತಾಲೂಕಾ ದೈಹಿಕ ಶಿಕ್ಷಣ ಅಧಿಕಾರಿ ಎಸ್.ಜೆ. ಬಿರಾದಾರ, ಪ್ರಾಥಮಿಕ ದೈಹಿಕ ಶಿಕ್ಷಕ ಸಂಘ ಅಧ್ಯಕ್ಷರು ಬಸವರಾಜ ಬೇಲೂರ, ಡಾ. ವಿ.ಬಿ. ದೇಸಾಯಿ ಸೇರಿದಂತೆ ಆಯುರ್ವೇದಿಕ ಕಾಲೆಜ, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು, ಬಿ.ಎಲ್.ಡಿ.ಇ. ಪದವಿ ಪೂರ್ವ ಕಾಲೇಜು, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಿಲ್ಲಾ ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗ ನಡಿಗೆ ಕಾರ್ಯಕ್ರಮದ ಮೂಲಕ ಯೋಗ ಕುರಿತಾಗಿ ಜಾಗೃತಿ ಮೂಡಿಸಲಾಯಿತು.