ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದು ಪ್ರತಿ ಪ್ರಜೆಯ ಕರ್ತವ್ಯ.

ಚಿತ್ರದುರ್ಗ. ಜೂ.೧೩: ಭಾರತದ ಪ್ರಾಚೀನ ಕಲೆಗಳಲ್ಲಿ ಒಂದಾದ ಯೋಗಭ್ಯಾಸ ನಮ್ಮ ಜೀವನದಲ್ಲಿ ಮೌಲ್ಯೀಕರಿಸುವ  ಮಹತ್ವವನ್ನು ಒತ್ತಿಹೇಳಲು ಯೋಗ ದಿನಾಚರಣೆ ಒಂದು ದೊಡ್ಡ ಪ್ರಯತ್ನವಾಗಿದೆ. ಯೋಗವು ಮನಸ್ಸು, ದೇಹ ಮತ್ತು ಆತ್ಮದ ಏಕತೆಯನ್ನು ಶಕ್ತಗೊಳಿಸುತ್ತದೆ. ಯೋಗದ ವಿವಿಧ ರೂಪಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಈ ವಿಶಿಷ್ಟ ಕಲೆಯನ್ನು ಆನಂದಿಸಲು ಅಂತರಾಷ್ಟ್ರೀಯ ಯೋಗ ದಿನದ ಆಚರಣೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಪ್ರಜೆಯ  ಕರ್ತವ್ಯವಾಗಿದೆ ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಯುಗ ಪ್ರಚಾರಕ ರವಿ ಕೆ ಅಂಬೇಕರ್ ಕರೆ ನೀಡಿದರು.ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ  ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರು ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಯೋಗ ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರ ಆಯುಷ್ ಇಲಾಖೆಯು ಅಂತರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಸೂಚಿಸಿರುವ ಶಿಷ್ಟಾಚಾರದ ಯೋಗ ಚಾಲನ ಕ್ರಿಯೆಗಳು, ಯೋಗಾಸನಗಳು ಪ್ರಾಣಾಯಾಮ ಧ್ಯಾನ ಇವುಗಳ ತರಬೇತಿ ನೀಡಲಾಯಿತು.ರಬೇತಿಯಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳ ಜೊತೆಗೆ ಶ್ರೀ ರಾಮ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಡಿ, ಹಾಗೂ ಸಿಬ್ಬಂದಿಗಳಾದ ವಿದ್ಯಾ ಲಕ್ಷ್ಮಿ ಎಸ್. ಎಂ., ಉಪನ್ಯಾಸಕರಾದ ಶ್ರೀಮತಿ ರಂಜಿತಾ, ಚೇತನ ಶ್ರೀ, ಮುಂತಾದವರು ಭಾಗವಹಿಸಿದ್ದರು.