ಯೋಗ ಗುರು ಮಚೇಂದ್ರನಾಥ್ ಮೂಲಗೆ ನಿಧನ

ಕಲಬುರಗಿ.ಮೇ.24: ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷ ಡಾ. ಮಚೇಂದ್ರನಾಥ್ ಮೂಲಗೆ ಅವರು ಬುಧವಾರ ಮಧ್ಯಾಹ್ನ 2-30 ಗಂಟೆಗೆ ಆಕಸ್ಮಿಕವಾಗಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು, ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮಧ್ಯಾಹ್ನ ಲಘು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎನ್ನಲಾಗಿದೆ. ಮೃತರ ಅಂತ್ಯಕ್ರಿಯೆಯು ಅವರ ಸ್ವಗ್ರಾಮ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗದಲೆಗಾಂವ್ ಗ್ರಾಮದಲ್ಲಿ ಮೇ 25ರಂದು ಸಂಜೆ 4 ಗಂಟೆಗೆ ನೆರವೇರಲಿದೆ. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ನಗರದ ಗಂಜ್ ಬ್ಯಾಂಕ್ ಕಾಲೋನಿಯ ಅವರ ಸ್ವಗೃಹದಲ್ಲಿ ಮೇ 25ರಂದು ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಮಚೇಂದ್ರನಾಥ್ ಮೂಲಗೆ ಅವರು ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರಾಗಿದ್ದರು. ಮಹಾನಗರ ಪಾಲಿಕೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಖರ ಹಿಂದೂತ್ವವಾದಿಗಳು ಆಗಿದ್ದರು. ಯೋಗ ಗುರು ಬಾಬಾರಾಮದೇವ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಯೋಗ ಶಿಕ್ಷಣಕ್ಕಾಗಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರು ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷರೂ ಆಗಿದ್ದರು. ನಗರದ ಉದ್ಯಾನವನಗಳಲ್ಲಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಶ್ರೀಸಾಮಾನ್ಯರಿಗೂ ಯೋಗ ಶಿಕ್ಷಣವನ್ನು ಹೇಳಿಕೊಡುತ್ತಿದ್ದರು.
ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಆಗಿನ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಅವರ ಸಲಹೆಯಂತೆ ಕೈದಿಗಳಿಗೂ ಸಹ ಯೋಗ ಶಿಕ್ಷಣವನ್ನು ಮಚೇಂದ್ರನಾಥ್ ಮೂಲಗೆ ಅವರು ಹೇಳಿಕೊಟ್ಟಿದ್ದರು.
ಮಚೇಂದ್ರನಾಥ್ ಮೂಲಗೆ ಅವರು ಪಂಚಪೀಠಗಳ ಮೇಲೆ ಅಪಾರ ಗೌರವ, ಶೃದ್ಧೆಯನ್ನು ಹೊಂದಿದ್ದರು. ಸಮಾಜಕ್ಕೆ ಹಾಗೂ ಹಿಂದುತ್ವಕ್ಕೆ ಅನ್ಯಾಯವಾದಾಗ ಅದನ್ನು ಸಹಿಸದೇ ವಿರೋಧ ಹಾಗೂ ಆಕ್ರೋಶ ಮತ್ತು ಪ್ರತಿಭಟನೆಯನ್ನೂ ಮಾಡುತ್ತಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ರಾಜ್ಯ ರಾಜಕೀಯ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದರು. ಆ ಸಂದರ್ಭದಲ್ಲಿ ಮೊದಲ ಬಾರಿಗೆ ಕಲಬುರ್ಗಿ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮತಯಾಚನೆಗಾಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಹಾಲಿ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಮಾತನಾಡಿ, ಯಾರು ಖರ್ಗೆಯವರಿಗೆ ಮತ ಹಾಕುವರೋ ಅವರು ನಿಜವಾದ ಲಿಂಗಾಯತರು. ಯಾರು ಖರ್ಗೆಯವರಿಗೆ ಮತ ಹಾಕುವುದಿಲ್ಲವೋ ಅವರು ಲಿಂಗಾಯತರು ಅಲ್ಲ ಎಂಬ ವಿವಾದಿತ ಹೇಳಿಕೆಯನ್ನು ನೀಡಿದರು. ಆ ಹೇಳಿಕೆಗೆ ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರ ಪರವಾಗಿ ಗುರುತಿಸಿಕೊಂಡಿದ್ದ ಮಚೇಂದ್ರನಾಥ್ ಮೂಲಗೆ ಅವರು ಪ್ರಬಲವಾಗಿ ವಿರೋಧಿಸಿ, ಪ್ರತಿಭಟನೆ ಆರಂಭಿಸಿದರು. ಒಂದು ಹಂತದಲ್ಲಿ ಪರ ವಿರೋಧದ ಮಾತುಗಳು ಕೇಳಿ ಬಂದು ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಆ ಸಂದರ್ಭದಲ್ಲಿ ದೂರು, ಪ್ರತಿ ದೂರು ಸಹ ದಾಖಲಾಗಿದ್ದವು.
ಮಚೇಂದ್ರನಾಥ್ ಮೂಲಗೆ ಅವರ ನಿಧನಕ್ಕೆ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿಯ ಡಾ. ಚಂದ್ರಶೇಖರ್ ಮಹಾಸ್ವಾಮಿಗಳು, ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಸ್ಟೇಷನ್ ಬಬಲಾದ್‍ನ ಶಿವಮೂರ್ತಿ ಶಿವಾಚಾರ್ಯರು, ತೊನಸನಹಳ್ಳಿಯ ಶ್ರೀಗಳು, ಸುತ್ರೇಶ್ವರ್ ಶ್ರೀಗಳು, ಮಾಜಿ ಮಹಾಪೌರರಾದ ಧರ್ಮಪ್ರಕಾಶ್ ಪಾಟೀಲ್, ಶಿವಶರಣಪ್ಪ ಸೀರಿ, ರೇಣುಕಾನಂದ್ ಚೌಧರಿ, ಸಿದ್ರಾಮಪ್ಪ ಆಲಗೂಡಕರ್, ಅಮೃತಪ್ಪ ಮಲಕಪ್ಪಗೌಡ, ಗುರುಪಾದಪ್ಪ ಕಿಣಗಿ, ಶರಣಬಸಪ್ಪ ಹೀರಾ, ಕೆ. ಮಹಾದೇವಯ್ಯ, ಮಹಿಪಾಲರೆಡ್ಡಿ ಮುನ್ನೂರ್, ಕಿರಣ್ ಪಾಟೀಲ್, ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಡಾ. ಭವರಲಾಲ್ ಆರ್ಯಜಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ, ಉದಯಕುಮಾರ್ ಜೇವರ್ಗಿ, ಬಿ. ಅಶೋಕಕುಮಾರ್ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.