ಯೋಗೇಶ್ವರ್ ವಜಾಕ್ಕೆ ನಿಷ್ಠ ಶಾಸಕರ ಪಟ್ಟು

ಬೆಂಗಳೂರು, ಮೇ ೩೦- ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎಂಬಂತೆ ವರಿಷ್ಠರ ಕಟ್ಟಪ್ಪಣೆಯ ನಂತರವೂ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸಾಗಿದ್ದು, ನಾಯಕತ್ವ ಬದಲಾವಣೆ ಚರ್ಚೆಯ ಕಿಡಿ ಇನ್ನೂ ಆರಿಲ್ಲ. ನಾಯಕತ್ವ ಬದಲಾವಣೆಯ ಚರ್ಚೆಗೆ ಕಾರಣವಾದ ಸಚಿವ ಸಿ.ಪಿ. ಯೋಗೀಶ್ವರ್ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪನವರ ನಿಷ್ಠ ಶಾಸಕರು ತಿರುಗಿ ಬಿದ್ದಿದ್ದು, ಸಚಿವ ಸ್ಥಾನದಿಂದ ಯೋಗೀಶ್ವರ್ ಅವರನ್ನು ವಜಾ ಮಾಡುವಂತೆ ಪಟ್ಟು ಹಾಕಿದ್ದಾರೆ.
ಸಚಿವ ಯೋಗೀಶ್ವರ್ ಅವರು ನಾಯಕತ್ವದ ವಿರುದ್ಧ ಮಾತನಾಡಿದ್ದಾರೆ. ಇಂಥವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುವುದು ಬೇಡ. ಕೂಡಲೇ ಸಚಿವ ಯೋಗೀಶ್ವರ್ ಅವರನ್ನು ಸಂಪುಟದಿಂದ ಕೈ ಬಿಡಿ ಎಂದು ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ೧೮ಕ್ಕೂ ಹೆಚ್ಚು ಬಿಜೆಪಿ ಶಾಸಕರು ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದು ಬೆಳಿಗ್ಗೆಯೇ ಭೇಟಿ ಮಾಡಿದ ಶಾಸಕರ ಗುಂಪು ಕೋವಿಡ್‌ನ ಈ ಸಂದರ್ಭದಲ್ಲಿ ನಾಯಕತ್ವದ ವಿಚಾರ ಪ್ರಸ್ತಾಪಿಸಿ “ಆಟ” ಆಡುತ್ತಿರುವ ಸಚಿವ ಯೋಗೀಶ್ವರ್ ಅವರಿಗೆ ಪಾಠ ಕಲಿಸಿ. ಅವರನ್ನು ಸಂಪುಟದಿಂದ ವಜಾ ಮಾಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ಸಚಿವ ಯೋಗೀಶ್ವರ್ ಹದ್ದು ಮೀರಿ ನಡೆದುಕೊಳ್ಳುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅನಗತ್ಯವಾಗಿ ವಿಜಯೇಂದ್ರರವರ ಹೆಸರನ್ನು ಪ್ರಸ್ತಾಪಿಸಿ ಅವರ ಬಗ್ಗೆಯೂ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಇದರಿಂದ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ. ಯೋಗೀಶ್ವರ್ ಅವರನ್ನು ಸಂಪುಟದಿಂದ ಕೈ ಬಿಡಲೇಬೇಕು ಎಂಬ ಒತ್ತಾಯವನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದೇವೆ ಎಂದು ಶಾಸಕರ ಗುಂಪಿನ ನೇತೃತ್ವ ವಹಿಸಿರುವ ರೇಣುಕಾಚಾರ್ಯ ಸಂಜೆವಾಣಿಗೆ ತಿಳಿಸಿದರು.
ಸಚಿವ ಯೋಗೀಶ್ವರ್ ಅವರ ವಿರುದ್ಧ ಶಾಸಕರ ಆಕ್ಷೇಪಣೆ, ದೂರುಗಳನ್ನು ಮುಖ್ಯಮಂತ್ರಿಗಳು ಸಮಾಧಾನಚಿತ್ತದಿಂದ ಆಲಿಸಿ, ಇದು ರಾಜಕಾರಣ ಮಾಡುವ ಹೊತ್ತಲ್ಲ. ನಿಮ್ಮ ಕ್ಷೇತ್ರಗಳಲ್ಲಿ ಕೋವಿಡ್ ನಿಗ್ರಹಕ್ಕೆ ಗಮನಹರಿಸಿ. ವರಿಷ್ಠರು ಎಲ್ಲದರ ಬಗ್ಗೆ ತೀರ್ಮಾನ ಮಾಡುತ್ತಾರೆ. ವರಿಷ್ಠರ ಅಭಯ ತಮಗಿದೆ. ಯಾವುದೇ ವಿಚಾರಗಳಿಗೂ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಮುಖ್ಯಮಂತ್ರಿಗಳು ಹೇಳಿದರು ಎಂದು ರೇಣುಕಾಚಾರ್ಯ ತಿಳಿಸಿದರು.
ಸಚಿವ ಯೋಗೀಶ್ವರ್ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧವೇ ಬಹಿರಂಗ ಟೀಕೆ ಮಾಡಿ ರಾಜ್ಯದಲ್ಲಿರುವುದು ಶುದ್ಧ ಬಿಜೆಪಿ ಸರ್ಕಾರವಲ್ಲ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳ ಹೊಂದಾಣಿಕೆಯ ಸರ್ಕಾರ. ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದರು. ಯಡಿಯೂರಪ್ಪ ನಿಷ್ಠ ಸಚಿವರು, ಶಾಸಕರು ಯೋಗೀಶ್ವರ್ ವಿರುದ್ಧ ಹರಿಹಾಯ್ದಿದ್ದರು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ವರಿಷ್ಠರು ಕೋವಿಡ್‌ನ ಈ ಸಂದರ್ಭದಲ್ಲಿ ಯಾರೂ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಕಟ್ಟಪ್ಪಣೆ ಮಾಡಿದ್ದರು. ವರಿಷ್ಠರ ಸೂಚನೆ ನಂತರ ಮೇಲ್ನೋಟಕ್ಕೆ ಎಲ್ಲರೂ ಶಾಂತವಾಗಿರುವಂತೆ ಕಂಡಿತ್ತು. ಆದರೆ ಇಂದು ಮತ್ತೆ ಬಿಜೆಪಿಯಲ್ಲಿ ಅಸಮಾಧಾನಗಳು ಸ್ಫೋಟಗೊಂಡಿದ್ದು, ಶಾಸಕರುಗಳು ಸಚಿವ ಯೋಗೀಶ್ವರ್ ವಜಾ ಬೇಡಿಕೆಯೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಇದು ಮುಂದೆ ಯಾವೆಲ್ಲಾ ಬೆಳವಣಿಗೆಗೆ ಕಾರಣವಾಗುತ್ತದೋ ಎಂಬುದು ಕುತೂಹಲ ಮೂಡಿಸಿದೆ.
ಶಾಸಕರಾದ ರೇಣುಕಾಚಾರ್ಯ, ರಾಜುಗೌಡ, ಹೆಚ್.ಕೆ. ಕುಮಾರಸ್ವಾಮಿ, ಬೆಳ್ಳಿ ಪ್ರಕಾಶ್, ವಿರೂಪಾಕ್ಷಪ್ಪ, ಬಸವರಾಜ ದಡೆಸೂರು, ಲಿಂಗಣ್ಣ, ಎಸ್.ವಿ. ರಾಮಚಂದ್ರ, ಜ್ಯೋತಿ ಗಣೇಶ್, ಮಸಾಲೆ ಜಯರಾಂ, ಅರುಣ್‌ಕುಮಾರ್, ಕರಣ್ಣ ಮನಳ್ಳಿ, ವೆಂಕಟ್‌ರೆಡ್ಡಿ ಮುದ್ನಾಳ್, ನಿರಂಜನ್, ಡಾ. ಶಿವರಾಜ್ ಪಾಟೀಲ್, ಗೂಳಿ ಹಟ್ಟಿ ಶೇಖರ್ ಸೇರಿದಂತೆ ಹಲವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.