ಯೋಗೇಶ್ವರ್‌ಗೆ ಸಚಿವ ಸ್ಥಾನಕ್ಕೆ ಕುತ್ತು

ಬೆಂಗಳೂರು,ಜೂ. ೧- ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಪರ-ವಿರೋಧ ಚಟುವಟಿಕೆಗಳು, ಚರ್ಚೆಗಳು ನಡೆದಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ದಿಢೀರ್ ಎಂದು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಇಂದು ಬೆಳಿಗ್ಗೆಯೇ ಕೆಲ ಆಪ್ತರ ಜತೆ ದೆಹಲಿಗೆ ತೆರಳಿರುವ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿಯಲ್ಲಿನ ಕೆಲ ಬೆಳವಣಿಗೆಗಳನ್ನು ಅರುಣ್‌ಸಿಂಗ್ ಅವರ ಗಮನಕ್ಕೆ ತರಲಿದ್ದಾರೆ ಎಂದು ಹೇಳಲಾಗಿದೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಗೊಂದಲ ಮೂಡಿಸುವ ಹೇಳಿಕೆಗಳನ್ನು ನೀಡಿ ನಾಯಕತ್ವದ ವಿರುದ್ಧವೇ ದನಿ ಎತ್ತಿರುವ ಸಚಿವ ಯೋಗೇಶ್ವರ್ ಅವರ ವಿರುದ್ಧ ವಿಜಯೇಂದ್ರ ಅರುಣ್‌ಸಿಂಗ್ ಅವರಿಗೆ ದೂರು ನೀಡಿ ಸಂಪುಟದಿಂದ ಕೈ ಬಿಡಲು ನೆರವಾಗುವಂತೆ ಮನವಿ ಮಾಡಲಿದ್ದಾರೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕೆಲ ಸಚಿವರು, ಶಾಸಕರು ನಡೆಸಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಗೊಂದಲಗಳಿಗೆ ತೆರೆ ಎಳೆಯುವಂತೆ ವಿಜಯೇಂದ್ರ ವರಿಷ್ಠರಲ್ಲಿ ಮನವಿ ಮಾಡುವರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಸಚಿವ ಯೋಗೇಶ್ವರ್ ಅವರು ಕೆಲ ಶಾಸಕರ ಜತೆ ನಾಯಕತ್ವ ಬದಲಾವಣೆ ಸಂಬಂಧ ದೆಹಲಿಗೆ ಹೋಗಿ ಬಂದ ನಂತರ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸಾಗಿದ್ದವು. ಸಚಿವ ಯೋಗೇಶ್ವರ್ ಬಹಿರಂಗವಾಗಿಯೇ ಸರ್ಕಾರದ ಕಾರ್ಯವೈಖರಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಇದಾದ ಬೆನ್ನಲ್ಲೆ ಯಡಿಯೂರಪ್ಪ ನಿಷ್ಠ ಶಾಸಕರು ಯೋಗೇಶ್ವರ್ ಅವರ ವಿರುದ್ಧ ತಿರುಗಿ ಬಿದ್ದು, ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಒತ್ತಡ ಹೇರಿದ್ದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾಗುತ್ತದೆ ಎಂಬ ಚರ್ಚೆಗಳು ಸಂಚಲನ ಮೂಡಿಸಿದ್ದವು. ಪಕ್ಷದ ವರಿಷ್ಠರು ಕೊರೊನಾ ಸಂದರ್ಭದಲ್ಲಿ ಈ ರೀತಿಯ ಚಟುವಟಿಕೆಗಳು, ಹೇಳಿಕೆಗಳು ಕೂಡದು ಎಂದು ಕಟ್ಟಪ್ಪಣೆ ಮಾಡಿದ್ದರೂ ಒಳಗೊಳಗೆ ನಾಯಕತ್ವ ಬದಲಾವಣೆಯ ಚಟುವಟಿಕೆಗಳು ನಡೆದೇ ಇದ್ದವು.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಕರೆಯುವಂತೆಯೂ ಯಡಿಯೂರಪ್ಪ ವಿರೋಧಿ ಶಾಸಕರುಗಳು ಹೈ ಕಮಾಂಡ್‌ಗೆ ಗುಟ್ಟಾಗಿ ಮನವಿ ಮಾಡಿದ್ದರು. ಜೂ. ೭ ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲು ವರಿಷ್ಠರು ಸೂಚಿಸಿದ್ದಾರೆ ಎಂಬ ಸುದ್ದಿಗಳು ಹರಿದ್ದಾಡಿದ್ದವಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ತಳ್ಳಿ ಹಾಕಿದರು.
ನಾಯಕತ್ವ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು, ಕೇಂದ್ರ ಸಚಿವ ಪ್ರಹ್ಲಾದ್‌ಜೋಷಿ ಹೇಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದರು.
ಇಷ್ಟೆಲ್ಲ ರಾಜಕೀಯ ಎಲ್ಲ ಬೆಳವಣಿಗೆಗಳಾದ ಮೇಲೆ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡರೂ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ವಿಜಯೇಂದ್ರರವರ ದೆಹಲಿ ಭೇಟಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಪಕ್ಷದ ಹೈಕಮಾಂಡ್‌ನ ಬುಲಾವ್ ಮೇರೆಗೆ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೋ, ಇಲ್ಲವೇ ಅವರೇ ಸ್ವತಃ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೋ ಎಂಬುದು ಖಚಿತವಾಗಿಲ್ಲ.

ವಿಜಯೇಂದ್ರ ಹೇಳಿಕೆ


ದೆಹಲಿಗೆ ವೈಯಕ್ತಿಕ ಕೆಲಸದ ಮೇಲೆ ಬಂದಿದ್ದೇನೆ. ಇದು ರಾಜಕೀಯ ಭೇಟಿ ಅಲ್ಲ ಎಂದು ದೆಹಲಿಯಲ್ಲಿ ವಿಜಯೇಂದ್ರ ಅವರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ವೈಯಕ್ತಿಕ ಕೆಲಸವಿತ್ತು. ಹಾಗಾಗಿ, ದೆಹಲಿಗೆ ಬಂದಿದ್ದೇನೆ, ವರಿಷ್ಠರನ್ನು ಭೇಟಿ ಮಾಡುವ ಯಾವುದೇ ಉದ್ದೇಶವಿಲ್ಲ. ಸಾಧ್ಯವಾದರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ತಮ್ಮ ದೆಹಲಿ ಭೇಟಿಗ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇದು ನಿಗದಿತ ರಾಜಕೀಯ ಭೇಟಿ ಅಲ್ಲ ಎಂದು ಪುನರುಚ್ಛರಿಸಿದ್ದಾರೆ.