ಯೋಗೀಶ್ ಗೌಡ ಹತ್ಯೆ: ವಿನಯ್‌ಗೆ ಕಂಟಕ

ಬೆಂಗಳೂರು, ನ.೮-ಧಾರವಾಡ ಜಿ.ಪಂ. ಸದಸ್ಯ ಯೋಗೀಶ್‌ಗೌಡ ಕೊಲೆ ಕೃತ್ಯದ ಸಂಬಂಧ ಬಂಧಿಸಿರುವ ಆರೋಪಿಗಳು ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆ ಬಾಯಿಬಿಟ್ಟಿರುವ ಮಾಹಿತಿಯೇ ಮಾಜಿ ಸಚಿವ ವಿನಯ ಕುಲಕರ್ಣಿಗೆ ಕಂಟಕವಾಗಿ ಪರಿಣಮಿಸಿದೆ.
ಮಾಜಿ ಸಚಿವ ವಿನಯ ಕುಲಕರ್ಣಿಯೇ ಯೋಗೀಶಗೌಡ ಕೊಲೆಯ ಸಂಚುಗಾರ ಎನ್ನುವುದನ್ನು ಸಿಬಿಐ ಅಧಿಕಾರಿಗಳು
ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ದ್ವೇಷದ ಕಾರಣದಿಂದಲೇ ಯೋಗೀಶಗೌಡ ಕೊಲೆಯಾಗಿದೆ. ಆಗ ಸಚಿವರಾಗಿದ್ದ ವಿನಯ ಕುಲಕರ್ಣಿಯೇ ಹತ್ಯೆಯ ಸಂಚು ನಡೆಸಿದ್ದರು ಎನ್ನುವುದನ್ನು ಸಿಬಿಐ ಅಧಿಕಾರಿಗಳು ಧಾರವಾಡದ ಪ್ರಧಾನ ಮುಖ್ಯ ನ್ಯಾಯಾಲಯ(ಕಿರಿಯ ವಿಭಾಗ)ಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ
ಚುನಾವಣೆಯಿಂದ ಹಿಂದೆ ಸರಿಯಲು ಹೇಳಿದ್ದಕ್ಕೆ ಯೋಗೀಶ್‌ಗೌಡ ಒಪ್ಪಿರಲಿಲ್ಲ. ಈ ವಿಚಾರವಾಗಿ ಪರಸ್ಪರ ವಾಕ್ಸಮರವೂ ಆಗಿತ್ತು. ಮುಂದೆ ಚುನಾವಣೆಗೆ ಕೆಲವೇ ಗಂಟೆ ಮೊದಲು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ಯೋಗೀಶಗೌಡ ಬಂಧನವಾಗಿತ್ತು. ’ನಿನ್ನನ್ನು ಕೊಲೆ ಮಾಡಿಸಲು ವಿನಯ ಕುಲಕರ್ಣಿ ಸಂಚು ನಡೆಸಿದ್ದಾರೆ’ ಎಂದು ಯೋಗೀಶಗೌಡಗೆ ಅನಾಮಧೇಯ ಪತ್ರವೂ ಬಂದಿತ್ತು.
ಸಚಿವರಾಗಿದ್ದ ವಿನಯ ಕುಲಕರ್ಣಿ ೨೨.೦೪.೨೦೧೬ರಂದು ಧಾರವಾಡ ಜಿ.ಪಂ.ದಲ್ಲಿ ಸಭೆ ಕರೆದಿದ್ದರು. ಆಗ ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಮತ್ತು ಸಚಿವ ಕುಲಕರ್ಣಿ ಮಧ್ಯೆ ಗಂಭೀರ ವಾಕ್ಸಮರ ಆಗಿತ್ತು. ಪರಸ್ಪರರು ಕೆಕ್ಕರಗಣ್ಣಿಂದ ನೋಡಿಕೊಂಡಿದ್ದರು. ಬಹಿರಂಗವಾಗಿಯೇ ತನಗೆ ಸವಾಲು ಹಾಕಿದ್ದ ಯೋಗೀಶಗೌಡ ವಿಷಯದಲ್ಲಿ ಉಂಟಾದ ವೈಯಕ್ತಿಕ ಮತ್ತು ರಾಜಕೀಯ ದ್ವೇಷದ ಕಾರಣದಿಂದ ವಿನಯ ಕುಲಕರ್ಣಿ ಕೊಲೆಗೆ ಸಂಚು ರೂಪಿಸಿದ್ದರು. ಈ ಸಂಚನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ತನ್ನ ಸಹಚರ ಬಸವರಾಜ ಮುತ್ತಗಿಗೆ ವಹಿಸಿದ್ದರು ಎಂದು ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಸಿಬಿಐ ತಿಳಿಸಿದೆ.
ತನಿಖೆ ವೇಳೆ ಸಿಬಿಐ ಅಧಿಕಾರಿಗಳು, ಘಟನಾ ಸಂದರ್ಭದಲ್ಲಿ ವಿನಯ ಕುಲಕರ್ಣಿ ಎರಡೆರಡು ಸಲ ದೆಹಲಿಗೆ ಭೇಟಿ ನೀಡಿರುವುದು, ಬೆಂಗಳೂರಿನ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದು ಸೇರಿ ವಿವಿಧ ಮಾಹಿತಿ, ದಾಖಲೆಗಳನ್ನು ಬಹಳ ಪರಿಶ್ರಮದಿಂದ ಸಂಗ್ರಹಿಸಿರುವುದು ತಿಳಿದುಬಂದಿದೆ.
೨೦೧೬ರ ಜೂನ್ ೧೫ರಂದು ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ತನ್ನದೇ ಮಾಲೀಕತ್ವದ ಉದಯ ಜಿಮ್ ಗೆ ಎಂದಿನಂತೆ ಬಂದ ಯೋಗೀಶಗೌಡನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.ಈ ಘಟನೆಗೆ ಮುನ್ನ ಮತ್ತು ಘಟನೆ ನಂತರ ವಿನಯ ಕುಲಕರ್ಣಿ ದೆಹಲಿಗೆ ಪ್ರವಾಸ ಮಾಡಿದ್ದು, ಘಟನೆ ವೇಳೆ ತಾನು ಜಿಲ್ಲಾ ಕೇಂದ್ರದಲ್ಲಿ ಇರಲೇ ಇಲ್ಲ. ರಾಜಧಾನಿ ಮತ್ತು ದೆಹಲಿ ಮಧ್ಯೆ ಪ್ರವಾಸ ಮಾಡುತ್ತ ಏನೋ ಪ್ರಮುಖವಾದ ಕೆಲಸದಲ್ಲಿ ತೊಡಗಿಕೊಂಡಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.
೨೦೧೬ರ ಜೂ. ೧೨ರಂದು ದೆಹಲಿಗೆ ತೆರಳಿದ್ದ ಕುಲಕರ್ಣಿ ೧೩ರಂದು ಬೆಂಗಳೂರಿಗೆ ವಾಪಸಾಗಿದ್ದರು. ಜೂ. ೧೬ರಂದು ಪುನಃ ದೆಹಲಿಗೆ ತೆರಳಿ ೧೮ರಂದು ರಾಜಧಾನಿಗೆ ವಾಪಸಾಗಿದ್ದರು. ಪ್ರಯಾಣದ ದಿನವೇ ವಿಮಾನ ಟಿಕೆಟ್ ಪಡೆಯಲಾಗಿತ್ತು ಎಂಬುದನ್ನು ಸಿಬಿಐ ದಾಖಲೆ ಸಹಿತವಾಗಿ ಖಚಿತಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.
ಮೌರ್ಯ ಹೋಟೆಲ್‌ನಲ್ಲಿ ಕೊಠಡಿ:
ಬೆಂಗಳೂರಿನ ಮೌರ್ಯ ಹೋಟೆಲ್‌ನ ೫೫೫ನೇ ನಂಬರ್‌ನ ಕೊಠಡಿಯನ್ನು ವಿನಯ ಕುಲಕರ್ಣಿ ೨೦೧೬ರ ಜೂ. ೮ರಿಂದ ೨೦ರವರೆಗೆ ಕಾಯ್ದಿರಿಸಿಕೊಂಡಿದ್ದನ್ನು ಸಿಬಿಐ ಪತ್ತೆ ಹಚ್ಚಿದೆ. ಕೊಲೆ ಕೃತ್ಯವನ್ನು ವಹಿಸಿಕೊಂಡಿದ್ದ ತನ್ನ ಜತೆಗಾರರಿಗಾಗಿ ಈ ಕೊಠಡಿ ಕಾಯ್ದಿರಿಸಿದ್ದರು. ಅಲ್ಲಿ ಕೊಲೆಗಾರರೊಂದಿಗೆ ಭೇಟಿಯಾಗಿದ್ದರು.
ಕೊಲೆ ಸಂಚಿನ ಜಾರಿಯನ್ನು ವಹಿಸಿಕೊಂಡಿದ್ದ ಬಸವರಾಜ ಮುತ್ತಗಿ ಜೂ. ೧೬ರಂದು ರಾತ್ರಿ ೧.೩೦ರ ಹೊತ್ತಿಗೆ ಬೆಂಗಳೂರಿನ ಸದಾಶಿವ ನಗರದಲ್ಲಿ ವಿನಯ ಕುಲಕರ್ಣಿ ಹಾಗೂ ಜತೆಗಾರರನ್ನು ಭೇಟಿಯಾಗಿದ್ದರು ಎನ್ನುವುದು ಸಾಕ್ಷಿಗಳ ಹೇಳಿಕೆಯಿಂದ ಖಚಿತವಾಗಿದೆ. ನಿಜವಾದ ಹಂತಕರ ಬದಲಿಗೆ, ತಾವೇ ಹತ್ಯೆಯ ಆರೋಪಿಗಳು ಎಂದು ಬಸವರಾಜ ಮುತ್ತಗಿ, ವಿಕ್ರಂ ಬಳ್ಳಾರಿ, ಕೀರ್ತಿಕುಮಾರ ಕುರಹಟ್ಟಿ, ಸಂದೀಪ ಸವದತ್ತಿ, ವಿನಾಯಕ ಕಟಗಿ, ಮಹಾಬಳೇಶ್ವರ ಉರ್ಫ್ ಮುದುಕಪ್ಪ ಹೊಂಗಲ್ (೧ರಿಂದ ೬ರವರೆಗಿನವರು)ಸ್ಥಳೀಯ ಪೊಲೀಸರ ಎದುರು ಹಾಜರಾಗಲು ವಿನಯ ಕುಲಕರ್ಣಿ ವ್ಯವಸ್ಥೆ ಮಾಡಿದ್ದರು. ಕುಲಕರ್ಣಿ ಮತ್ತು ಅವರ ಸಿಬ್ಬಂದಿ, ಜತೆಗಾರರ ಫೋನ್ ಕರೆ ವಿವರಗಳು ಇದನ್ನು ಸ್ಪಷ್ಟವಾಗಿ ಖಚಿತಪಡಿಸುತ್ತವೆ ಎಂದು ಸಿಬಿಐ ಹೇಳಿದೆ.
ರೆಸಾರ್ಟ್‌ನಲ್ಲಿ ವಾಸ:
ಬೆಂಗಳೂರಿನಿಂದ ಧಾರವಾಡಕ್ಕೆ ಮೊದಲ ಸಲ ಬಂದಿದ್ದ ಸುಪಾರಿ ಹಂತಕರನ್ನು ದಾಂಡೇಲಿಯ ಹಾರ್ನ್‌ಬಿಲ್ ರೆಸಾರ್ಟ್‌ಗೆ ಕರೆದೊಯ್ದು ಉಳಿಸಲಾಗಿತ್ತು. ರೆಸಾರ್ಟ್ ಮಾಲೀಕ ರೂಪೇಂದ್ರ ರಾವ್, ವಿನಯ ಕುಲಕರ್ಣಿಗೆ ಚೆನ್ನಾಗಿ ಪರಿಚಿತ. ಆರೋಪಿ ಬಸವರಾಜ ಮುತ್ತಗಿಯನ್ನು ರೂಪೇಂದ್ರ ರಾವ್ ಆ ದಿನ ಫೋನ್ ಮೂಲಕ ಸಂರ್ಪಸಿರುವ ಮಾಹಿತಿಯನ್ನು ಸಿಬಿಐ ಸಂಗ್ರಹಿಸಿದೆ.
ಸಾಕ್ಷ್ಯ ನಾಶ ಯತ್ನ:
ವಿನಯ ಕುಲಕರ್ಣಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ ಮತ್ತು ತನಿಖೆಯ ಅಧೀಕ್ಷಣಾಧಿಕಾರಿಯಾಗಿದ್ದ ಎಸಿಪಿ ವಾಸುದೇವ ನಾಯ್ಕ ಸಹ ಸಾಕ್ಷಿ ನಾಶ ಮತ್ತು ಸಾಕ್ಷಿ ಸೃಷ್ಟಿಯಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಕಂಡುಬಂದಿದೆ.
ಮಧ್ಯಸ್ಥಿಕೆ:
ಯೋಗೀಶ್‌ಗೌಡ ಹತ್ಯೆಗೆ ಮೊದಲು ೨೪.೦೫.೨೦೧೬ರಂದು ಬಸವರಾಜ ಮುತ್ತಗಿ ಮತ್ತು ನಾಗೇಂದ್ರ ತೋಡಕರ ಮಧ್ಯೆ ರಿಯಲ್ ಎಸ್ಟೇಟ್ ಒಪ್ಪಂದವೊಂದು ವಿನಯ ಕುಲಕರ್ಣಿ ಮಧ್ಯಸ್ಥಿಕೆಯಲ್ಲೇ ನಡೆದಿತ್ತು. ಇದೇ ಕಾರಣಕ್ಕೆ ಮುತ್ತಗಿ ಮತ್ತು ಯೋಗೀಶಗೌಡ ಮಧ್ಯೆ ದ್ವೇಷ ಉಂಟಾಗಿತ್ತು ಎಂದು ಮೊದಲು ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು ದಾಖಲೆಗಳಲ್ಲಿ ಹೇಳಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ಮತ್ತು ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆ ಯೋಗೀಶಗೌಡ ಜತೆ ಅಂಥ ಯಾವುದೇ ವಿವಾದ ಇರಲಿಲ್ಲ ಎಂದು ಜಾಗದ ಮಾಲೀಕ ಹೇಳಿದ್ದಾರೆ. ಕೊಲೆ ಸಂಚನ್ನು ಕಾರ್ಯಗತಗೊಳಿಸಲೆಂದೇ ರಿಯಲ್ ಎಸ್ಟೇಟ್ ಒಪ್ಪಂದದ ಕಟ್ಟುಕತೆ ಸೃಷ್ಟಿಸಲಾಗಿತ್ತು ಎಂದು ಸಿಬಿಐ ಹೇಳಿದೆ.
ಈ ಮಧ್ಯೆ ವಿನಯ್ ಕುಲಕರ್ಣಿ ಕಸ್ಟಡಿ ಅವಧಿ ಅಂತ್ಯ ನಾಳೆ ಅಂತ್ಯವಾಗಲಿದ್ದು, ಸಿಬಿಐ ಅಧಿಕಾರಿಗಳು ಕಾಲಾವಕಾಶ ಕೇಳುವ ಸಾಧ್ಯತೆ. ಇದೆ ಮೂಲಗಳು ತಿಳಿಸಿವೆ.