ಯೋಗಿಕ ಕೃಷಿಯಿಂದ ಸ್ವರ್ಣಿಮ ಭಾರತ ನಿರ್ಮಾಣ: ಬಿ.ಕೆ ರಾಜುಭಾಯಿ

ಬೀದರ್:ಮಾ.16: ಯೋಗಿಕ ಕೃಷಿಯಿಂದ ಸ್ವರ್ಣಿಮ ಭಾರತ ನಿರ್ಮಾಣ ಸಾಧ್ಯವಿದೆ ಎಂದು ಬ್ರಹ್ಮಾಕುಮಾರಿ ಪ್ರಧಾನ ಕೇಂದ್ರವಾದ ಮೌಂಟ್ ಅಬುದಲ್ಲಿರುವ ಕೃಷಿ ಹಾಗೂ ಗ್ರಾಮ ವಿಕಾದ ಪ್ರಭಾರ ಕೇಂದ್ರದ ಉಪಾಧ್ಯಕ್ಷರಾದ ಬಿ.ಕೆ ರಾಜು ಭಾಯಿ ನುಡಿದರು.

ಗುರುವಾರ ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮ ಅವರಣದಲ್ಲಿ ‘ಸ್ವರ್ಣಿಮ ಭಾರತದ ಬುನಾದಿ, ಶಾಶ್ವತ ಯೋಗಿಕ ಕೃಷಿ’ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಇಂದು ತನ್ನ ಜಮಿನಿನಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕಿಟನಾಶಕ ಸಿಂಪಡಣೆ ಮಾಡುವುದರಿಂದ ಭೂಮಿ ಬಂಜರು ಭೂಮಿಯಾಗುತ್ತಿದ್ದು, ಇಳುವರಿ ಕಡಿಮೆಯಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಒಳಗಶಗಿ ಆತ್ಮ ಹತ್ಯೆಗೆ ಮುಂದಾಗುತ್ತಿರುವರು. ಇದರಿಂದ ಮನುಷ್ಯನ ದೈನಂದಿನ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜನ ಅನಾಚಾರ, ದೂರಾಚಾರ ಹಾಗೂ ಭ್ರಷ್ಟಾಚಾರಕ್ಕೆ ಒಳಗಾಗುತ್ತಿರುವರು. ಮನುಷ್ಯನ ಕ್ರೂರತನ ಹೆಚ್ಚಾಗುತ್ತಿದ್ದು, ಪ್ರಾಕೃತಿಕ ಹಾಗೂ ಯೋಗಿಕ ಕೃಷಿಯೆಡೆಗೆ ಯುವ ರೈತರು ಮುಂದೆ ಬರಬೇಕೆಂದು ಕರೆ ನೀಡಿದರು.

1965ಕ್ಕೂ ಮುನ್ನ ದೇಶದಲ್ಲಿ ಆಹಾರ ಕೊರತೆ ತಾಂಡವಾಡುತ್ತಿತ್ತು. ವಿದೇಶದಿಂದ ಆಹಾರ ಅಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಲಾಲ ಬಹಾದ್ದೂರ ಶಾಸ್ತ್ರಿ ಪ್ರಧಾನಿ ಆದ ಬಳಿಕ ‘ಜೈ ಜವಾನ ಜೈ ಕಿಶಾನ’ ಎಂಬ ಘೋಷಣೆ ಹೊರಡಿಸಿ ಆಹಾರ ಉತ್ಪನ್ನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದರು. ಆದರೆ ಮುಂದಿನ ಸರ್ಕಾರಗಳು ರಾಸಾಯನಿಕ ಕೃಷಿಗೆ ಉತ್ತೇಜನ ನೀಡಿ ಭಾರತವನ್ನು ಬಂಜರು ಭೂಮಿಯುಕ್ತ ಭಾರತವನ್ನಾಗಿ ಪರಿವರ್ತಿಸಿದರು ಎಂದು ಕಳವಳ ವ್ಯಕ್ತಪಡಿಸಿದರು.

ರಾಸಾಯನಿಕ ಕೃಷಿಯಿಂದ ಇಂದು ಮನುಷ್ಯನ ಬದುಕಿನ ಮೇಲು ಪರಿಣಾಮ ಬೀರುತ್ತಿದ್ದು, ಆಸ್ಪತ್ರೆಗಳು, ನ್ಯಾಯಾಲಯಗಳು, ಪೋಲಿಸ್ ಠಾಣೆಗಳು, ಜೈಲುಗಳು ಹೆಚ್ಚಾಗಿ ದೇಶದಲ್ಲಿನ ಅಧ್ಯಾತ್ಮ ಜೀವನ ನಾಶವಾಗುತ್ತಿದೆ. ಆದ್ದರಿಂದ ರೈತರು ತಮ್ಮ ಬೀಜವನ್ನು ಯೋಗ ಹಾಗೂ ಧ್ಯಾನ ಕೇಂದ್ರದಲ್ಲಿ ಇರಿಸಿ, ಭೂದೇವತೆ, ಜಲದೇವತೆ, ವಾಯುದೇವತೆ, ಅಗ್ನಿದೇವತೆ ಹಾಗೂ ಆಕಾಶ ದೇವತೆಯನ್ನು ಪೂಜಿಸಿ ಅದನ್ನು ಬಿತ್ತಿದರೆ ಶೇಕಡಾ 90 ಪ್ರತಿಶತ ಇಳುವರಿ ಬರಲು ಸಾಧ್ಯವಿದೆ ಎಂಬುದನ್ನು ಗುಜರಾತ ಹಾಗೂ ಛತ್ತಿಸಘಡ ವಿಶ್ವವಿದ್ಯಾಲಯಗಳು ಪ್ರಯೋಗ ಮಾಡಿವೆ ಎಂದರು.

ಭಾತಂಬ್ರಾ ಶ್ರೀಮಠದ ಪೂಜ್ಯ ಮ.ನಿ.ಪ್ರ ಶಿವಯೋಗೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಿ ಭಾರತದಲ್ಲಿ ಜನನಿ ಹಾಗೂ ಜನ್ಮಭೂಮಿ ಎರಡನ್ನು ಪವಿತ್ರವಾಗಿ ಕಾಣಲಾಗುತ್ತದೆ. ಇವೆರಡನ್ನು ಪೂಜಿಸುವ ದೇಶ ಕೇವಲ ಭಾರತ ಮಾತ್ರ. ಆದರೆ ಇಂದು ಭೂಮಿಗೆ ರಾಸಾಯನಿಕ ಹಾಕಿ ಭೂಮಿ ತಾಯಿಯನ್ನು ಬಲಾತ್ಕಾರ ಮಾಡುತ್ತಿದ್ದೇವೆ. ಇದರಿಂದ ಆಗಾಗ ಭೂಕಂಪ, ಜ್ವಾಲಾಮುಖಿ ಆಗುತ್ತಿದೆ. ಆದರೂ ಮನುಷ್ಯ ಅದರ ಸತ್ಯ ಅರಿಯುತ್ತಿಲ್ಲ. ಇತ್ತಿಚೀನ ಸರ್ಕಾರಗಳ ಕೃಷಿ ನೀತಿಯು ಮಾರಕವಾಗಿವೆ. ಇಂದು ಸತ್ಯ ಅಳುತ್ತಿದೆ, ಅಸತ್ಯ ಸಿಂಹಾಸನದ ಮೇಲೆ ಕುಂತಿದೆ. ಇಂಥ ಅಪಾಯಕಾರಿ ನೀತಿ ಬದಲಾವಣೆಯಾಗಿ ಯೋಗಿಕ ಕೃಷಿ, ಪ್ರಾಕೃತಿಕ ಕೃಷಿ, ನೈಸರ್ಗಿಕ ಕೃಷಿ ಹಾಗೂ ಸಾವಯವ ಕೃಷಿಯತ್ತ ಭಾರತ ಮರಳಬೇಕಿದೆ ಎಂದರು.

ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ ವೀರಣ್ಣ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದು ರೈತರ ಮಕ್ಕಳು ಕೃಷಿ ಉದ್ಯೋಗ ಬಿಟ್ಟು ಸಣ್ಣ ನೌಕರಿಗಳತ್ತ ತಮ್ಮ ಊರುಗಳನ್ನು, ತಂದೆ, ತಾಯಿಗಳನ್ನು ಬಿಟ್ಟು ತೆರಳುತ್ತಿರುವರು. ಸ್ವರ್ಗದಂಥ ಜಮಿನುಗಳನ್ನು ಉತ್ತು, ಬಿತ್ತದೇ ಹಾಳು ಗೆಡುತ್ತಿರುವುದು ದಯನಿಯ ಸಂಗತಿ. ಇಂಥ ದೈನ್ಯತೆ ಸರಿಪಡಿಸಲು ರೈತರು ತಮ್ಮ ಮಕ್ಕಳಿಗೆ ಬ್ರಹ್ಮಾಕುಮಾರಿ ಕೇಂದ್ರಗಳತ್ತ ಕಳುಹಿಸಿ ಯೋಗಿಕ ಕೃಷಿ ಬಗ್ಗೆ ಉತ್ತೇಜನ ನೀಡಲು ಮುಂದಾಗುವಂತೆ ಕರೆ ಕೊಟ್ಟರು.

ಸಾನಿಧ್ಯ ವಹಿಸಿದ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ ಮಾತನಾಡಿ, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ, ಅಧ್ಯಾತ್ಮ ಹಾಗೂ ಯೋಗಿಕ ಕೃಷಿ ಬಗ್ಗೆ ಶಿಕ್ಷಣ ನೀಡಬೇಕೆಂದು ಕರೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಮಾತನಾಡಿದರು.

ಆರಂಭದಲ್ಲಿ ಶೀತಲ ಪಾಂಚಾಳ ಪ್ರಾರ್ಥಿಸಿದರು. ಕು.ಖುಷಿ ಸ್ವಾಗತ ನೃತ್ಯಗೈದರು. ಪೂರ್ಣಚಂದ್ರ ಹಾಗೂ ಕು.ಸುಸ್ಮಿತಾ ರೈತಗೀತೆ ನೃತ್ಯ ಪ್ರಸ್ತುತ ಪಡಿಸಿದರು. ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಸ್ವಾಗತಿಸಿ, ಬಿ.ಕೆ ಸುಮನ ಕಾರ್ಯಕ್ರಮ ನಿರೂಪಿಸಿದರು. ಪರಮಾತ್ಮನ ಧ್ಯಾನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಯೋಗದಿಂದ ತಯ್ಯಾರಿಸಿದ ಬ್ರಹ್ಮಾಭೂಜನ ಸವಿದು ಪುನಿತರಾದರು.