ಕಲಬುರಗಿ:ಜೂ.22: ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞರಾದ ಎಸ್.ಎಸ್.ಪಟ್ಟಣಶೆಟ್ಟರ ವಹಿಸಿಕೊಂಡು, ಆಯುರ್ವೇದ ವೈದ್ಯಕೀಯ ಕ್ರಮವನ್ನು ಭಾರತವು ಇಡೀ ಜಗತ್ತಿಗೆ ಉತ್ತಮ ಕೊಡುಗೆಯಾಗಿ ನೀಡಿದೆ. ಪ್ರಾಚೀನ ಕಾಲದಿಂದಲೂ ಯೋಗವು ಆಯುಷ್ಯವೃದ್ಧಿ ಮತ್ತು ಆರೋಗ್ಯ ವೃದ್ಧಿಗೆ ದಿವ್ಯ ಔಷಧಿಯಾಗಿದೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, ಯೋಗದಿಂದ ಮನುಷ್ಯ ಒಳ್ಳೆಯ ಆರೋಗ್ಯ ಮಾತ್ರವಲ್ಲ ಏಕಾಗ್ರತೆ ಮತ್ತು ಜ್ಞಾನ ಸಂಪಾದಿಸುವ ಶಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯ. ಯೋಗದ ಇಂತಹ ಮಹತ್ವವನ್ನು ಅರಿತೇ ಪ್ರಾಚೀನ ಕಾಲದಿಂದಲೂ ಅನೇಕ ಸಾಧು-ಸಂತರು ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಉದಾಹರಣೆಗಳಿವೆ ಎಂದು ಹೇಳುತ್ತಾ ಆಸಾಲಿನಲ್ಲಿ ನಮ್ಮ ಪೂಜ್ಯ ಶ್ರೀ ಸಿದ್ದಲಿಂಗ ಶ್ರೀಗಳು ಕೂಡಾ ಸ್ವತಃ ಒಬ್ಬ ಯೋಗ ಸಾಧಕರಾಗಿದ್ದು, ನಮ್ಮ ಸಂಸ್ಥೆಯ ಆಶ್ರಯದಲ್ಲಿ ಬಸವ ಯೋಗ ಕೇಂದ್ರವನ್ನು ಪ್ರಾರಂಭಿಸಿದ್ದನ್ನು ಸ್ಮರಿಸಿದರು. ಆಧುನಿಕ ಯುಗದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮಾನವನು ನಡೆಸುತ್ತಿರುವ ಅನೇಕ ಚಟುವಟಿಕೆಗಳಿಂದ ಆರೋಗ್ಯ ಸುರಕ್ಷತೆ ಎನ್ನುವುದು ಒಂದು ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮನುಷ್ಯನಿಗೆ ಯೋಗವು ಒಂದು ಆರೋಗ್ಯ ರಕ್ಷಾ ಕವಚವಾಗಬಲ್ಲದು ಎಂದು ಹೇಳಿದರು.
ಸಮಾರಂಭದಲ್ಲಿ ಪ್ರಾ. ಎಂ.ಎಂ ಬುರುಡಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸಿ ಎಲ್ಲರೂ ತಮ್ಮ ಜೀವನದಲ್ಲಿ ಯೋಗಾಭ್ಯಾಸ ರೂಢಿಸಿಕೊಂಡು ಉತ್ತಮ ಆರೋಗ್ಯ ಬೆಳೆಸಿಕೊಳ್ಳಲು ತಿಳಿಹೇಳಿದರು. ಸಮಾರಂಭದಲ್ಲಿ ನಮ್ಮ ಮಹಾವಿದ್ಯಾಲಯದ ಸಿಬ್ಬಂದಿ ರಾಜಶೇಖರಯ್ಯ ಚಿಂಚಕಂಡಿಮಠ ಅವರು, ಎಲ್ಲ ವಿದ್ಯಾರ್ಥಿಗಳಿಗೆ ಯೋಗ ಮಾಡಿಸುವುದರ ಮೂಲಕ ಪ್ರಾಯೋಗಿಕವಾಗಿ ಯೋಗದ ಜಾಗೃತಿ ಮೂಡಿಸಿದರು. ಸಮಾರಂಭದಲ್ಲಿ ಎಲ್ಲ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ ಎಸ್.ಎಸ್ ಭಜಂತ್ರಿಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.