ಯೋಗದಿಂದ ಸಮೃದ್ಧ ಜೀವನ


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.13: ಯೋಗ, ಭೋಗ, ತ್ಯಾಗ ಎಂಬುವವು ಮಾನವನ ಅವಿಭಾಜ್ಯ ಅಂಗವಾಗಿವೆ ಇವುಗಳನ್ನು ನಿತ್ಯ ಜೀವನದಲ್ಲಿ ಆಳವಡಿಸಿಕೊಂಡು ಸಮೃದ್ಧ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅನಂತ್ ಝಂಡೇಕರ್ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕೋಶ ಸಹಭಾಗಿತ್ವದಲ್ಲಿ ಯೋಗ, ಶ್ರಮದಾನ, ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳ ನಿತ್ಯ ಯೋಜನೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.
ನಿತ್ಯದ ಒತ್ತಡ ಬದುಕಿನಿಂದ ಹೊರಬರಲು ಯೋಗ ಹಾಗೂ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿವೆ.ಯೋಗವನ್ನು ನಿತ್ಯ ಕಾಯಕವಾಗಿ ತೆಗೆದುಕೊಂಡಲ್ಲಿ ಆರೋಗ್ಯಯುತ ದಿನಚರಿ ಸಾಧ್ಯ ಎಂದು ಹೇಳಿದರು.
ವಿನೂತನ ಕಾರ್ಯಕ್ರಮದ ರೂವಾರಿಯಾದ ವಿಶ್ವವಿದ್ಯಾಲಯದ ಕುಲಸಚಿವರಾದ ರುದ್ರೇಶ್ ಎಸ್ ಎನ್ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿ. ಆರೋಗ್ಯ ಭಾಗ್ಯದ ಗುಟ್ಟು ನಮ್ಮಲ್ಲಿಯೇ ಇದೆ ಅದನ್ನು ಕಾಯ್ದುಕೊಳ್ಳಲು ಯೋಗ, ಶ್ರಮದಾನ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳಬೇಕು.ಕೇವಲ ವಿಶ್ವವಿದ್ಯಾಲಯದ ಸಿಬ್ಬಂದಿ ಮಾತ್ರವಲ್ಲದೆ ಅವರ ಕುಟುಂಬದವರು, ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಅಧೀನದ ಎಲ್ಲ ಕಾಲೇಜುಗಳಿಗೆ ವಿಸ್ತರಿಸುವ ಚಿಂತನೆ ಇದ್ದು, ಇದರಿಂದ ಎಲ್ಲ ಉಪನ್ಯಾಸಕರಿಗೆ, ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆಆರೋಗ್ಯ ಭಾಗ್ಯ ಪಡೆದುಕೊಳ್ಳುವ ಪ್ರಾತಿನಿಧ್ಯತೆ ದೊರೆಯುತ್ತದೆ ಎಂದರು.
ವಿಶ್ವವಿದ್ಯಾಲಯದ ಆವರಣದಲ್ಲಿರುವ ಗಿಡಗಳಿಗೆ ನೀರು ಶೇಖರಣೆಯಾಗಲು ಕುಣಿ ತೋಡುವ ಕಾರ್ಯಕ್ಕೆಖುದ್ದು ಕುಲಪತಿಗಳು ಮತ್ತು ಕುಲಸಚಿವರು ಗುದ್ದಲಿ, ಸಲಿಕೆ ಹಿಡಿದು ಶ್ರಮದಾನ ಮಾಡಿದರು.
ಕಾರ್ಯಕ್ರಮದಲ್ಲಿ ಯೋಗ ಉಪನ್ಯಾಸಕರಾದಮಹೇಶ್ ಬಾಬು ತರಬೇತಿ ನೀಡಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.