ಯೋಗದಿಂದ ರೋಗ ಮುಕ್ತ ಸಮಾಜನಿರ್ಮಾಣ: ಬಸವಪ್ರಭು ಶ್ರೀ

ಸಂಜೆವಾಣಿ ವಾರ್ತೆ

ದಾವಣಗೆರೆ. ನ.೯: ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.ಜಯದೇವ ಯೋಗ ಮತ್ತು ಧ್ಯಾನ ಕೇಂದ್ರ , ದಾವಣಗೆರೆ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಹಾಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಗರದ ಶಿವಯೋಗಾಶ್ರಮದ ಆವರಣದಲ್ಲಿ ನಡೆದ ದ್ವಿತೀಯ ದಾವಣಗೆರೆ ಜಿಲ್ಲಾ ಯೋಗಾಸನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಜಯದೇವ ಯೋಗ ಮತ್ತು ಧ್ಯಾನ ಕೇಂದ್ರ ಉತ್ತಮ ಕಾರ್ಯ ಮಾಡಿದೆ. ಮೂರು ವರ್ಷಗಳ ಹಿಂದೆ ಜಯದೇವ ಜಗದ್ಗುರುಗಳ ಸ್ಮರಣೋತ್ಸವದ ಅಂಗವಾಗಿ ಮೊದಲ ಬಾರಿ ಯೋಗಾಸನ ಸ್ಪರ್ಧೆಯನ್ನು ನಡೆಸಲಾಗಿತ್ತು. ಈ ಬಾರಿ ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಆನ್ ಲೈನ್ ನೋಂದಣಿ ಮೂಲಕ ಮಾಡಿದ್ದು, 246 ಜನ ಆನ್ ಲೈನ್ ನಲ್ಲಿ ಹಾಗೂ ಸ್ಥಳದಲ್ಲಿ 49 ಜನ ನೋಂದಾಯಿಸಿದ್ದಾರೆ. ಮುಂದೆ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಜಯದೇವ ಕೇಂದ್ರ ಹಮ್ಮಿಕೊಳ್ಳಲಿ” ಎಂದು ಆಶಿಸಿದರು.ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಜಿ. ಎನ್.ಕೃಷ್ಣಮೂರ್ತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಯ ಅಧ್ಯಕ್ಷ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಶಿವಯೋಗಾಶ್ರಮ ಟ್ರಸ್ಟ್ ನ ಟ್ರಸ್ಟಿ ಎಂ. ಜಯಕುಮಾರ್, ಮಹಾನಗರ ಪಾಲಿಕೆ ಸದಸ್ಯ ಶಾಂತಕುಮಾರ ಸೋಗಿ ಹಾಗೂ ಶ್ರೀಮತಿ ಕೆ. ಎಚ್. ಸುಲೋಚನ, ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಕೆ. ಪ್ರಭು, ಶ್ರೀಮತಿ ಭಾರತಿ ಬೇತೂರು ಬಸವರಾಜಪ್ಪ ಭಾಗವಹಿಸಿದ್ದರು. ಜಯದೇವ ಯೋಗ ಮತ್ತು ಧ್ಯಾನ ಕೇಂದ್ರದ ಅಧ್ಯಕ್ಷ ಶರಣಾರ್ಥಿ ಬಕ್ಕಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಬಿ. ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯನ್ನು ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ವಯೋಮಿತಿಯ ಆಧಾರದ ಮೇಲೆ ಎಂಟು ಗುಂಪುಗಳಲ್ಲಿ ನಡೆಸಲಾಯಿತು.ಆಕರ್ಷಕ ಯೋಗ ನೃತ್ಯ ಪ್ರದರ್ಶನ ನೀಡಿದ ಹರಿಹರದ ಕು. ಸೃಷ್ಟಿ ಹಾಗೂ ಚಿ. ಮಲ್ಲಿಕಾರ್ಜುನ ಮಾಳಗಿ ಎಲ್ಲರ ಪ್ರಶಂಸೆ ಗಳಿಸಿದರೆ ಕು.ಋತು ಹಿರೇಮಠ ತಮ್ಮ ಭರತನಾಟ್ಯ ಪ್ರದರ್ಶನದಿಂದ ರಂಜಿಸಿದರು.