ಕಲಬುರಗಿ:ಜೂ.22:ಜೀವನದಲ್ಲಿ ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ರೋಗಮುಕ್ತ ಜೀವನ ನಡೆಸಬಹುದಾಗಿದೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅಭಿಪ್ರಾಯಪಟ್ಟರು.
ಬುಧುವಾರ ಆಳಂದ ಪಟ್ಟಣದ ಪ್ರತಿಷ್ಠಿತ ಎಸ್‍ಆರ್‍ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಯೋಗ ಮಾನವ ದೇಹದ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಯೋಗ ಎನ್ನುವ ಪದ ಸಂಸ್ಕøತದ ಮೂಲಧಾತುವಾದ “ಯುಜ್” ನಿಂದ ಬಂದಿದ್ದು. ಇದು ಕೂಡಿಸು ಕೇಂದ್ರಿಕರಿಸು ಎನ್ನುವ ಅರ್ಥವನ್ನು ನೀಡುತ್ತದೆ. ಇಂತಹ ಅಮೂಲ್ಯ ಸಂಪತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ ಎಂದು ಹೇಳಿದರು.
ಚಂಚಲವಾದ ಮನಸ್ಸು ಏಕಾಗ್ರತೆ ತರಲು ಯೋಗದ ಮೊದಲು ಪ್ರಾರ್ಥನೆ ಮಾಡಿ ನಂತರ ದೇಹದ ಅಂಗಾಂಗಗಳು ಸಡಿಲಗೊಳ್ಳಲು ಶಿಥಿಲೀಕರಣ ವ್ಯಾಯಾಮವನ್ನು ಮಾಡಬೇಕು. ಇದು ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಗಂಟುನೋವು ಮತ್ತು ಗಂಟುಗಳಲ್ಲಿ ಬರುವ ಶಬ್ದಗಳನ್ನು ನಿವಾರಿಸಲು ನೆರವಾಗುತ್ತದೆ ಎಂದು ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ ಮಾತನಾಡಿ, ಯೋಗ ಕಲಿಕೆಯಿಂದ ಮಕ್ಕಳಲ್ಲಿ ವೈಚಾರಿಕತೆ, ಭಾವನಾತ್ಮಕ ರಚನೆ ಮತ್ತು ಸೃಜನ ಶೀಲತೆಯನ್ನು ಗಮನಿಸಬಹುದಾಗಿದೆ. ‘ಯಮ-ನಿಯಮ ಅನುಷ್ಟಾನೇ ಪಾಪ ನಿವೃತ್ತಿ’ ಅಂದರೆ ಯಮ-ನಿಯಮಗಳ ಅಭ್ಯಾಸವು ವ್ಯಕ್ತಿಯ ಮನಸ್ಸಿನಲ್ಲಿ ಬರುವ ಪಾಪಕರ್ಮಗಳನ್ನು ಮಾಡಬೇಕೆಂಬ ಯೋಜನೆಗಳನ್ನು ನಾಶಗೊಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ತಾಲೂಕಾ ಕಸಾಪ ಅಧ್ಯಕ್ಷ ಹಣಮಂತ ಶೇರಿ, ಬಿ.ಎಡ್ ಕಾಲೇಜು ಪ್ರಾಚಾರ್ಯ ಅಶೋಕರೆಡ್ಡಿ, ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ ಸೇರಿದಂತೆ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಯೋಗ ಮಾರ್ಗದರ್ಶಕ ದತ್ತಾತ್ರೇಯ ಬಿರಾದಾರ ಯೋಗ ಅಭ್ಯಾಸ ಮಾಡಿಸಿದರು. ಶಾಲೆಯ ಸುಮಾರು 500 ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕ ಸಿಬ್ಬಂದಿಗಳು ಯೋಗಭ್ಯಾಸ ಮಾಡಿದರು.