ಯೋಗದಿಂದ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ವೃದ್ಧಿ : ಮಾಜಿ ಶಾಸಕ ಡೊಂಗರಗಾಂವ

ಅಥಣಿ :ಸೆ.5: ಅನಾದಿ ಕಾಲದಿಂದಲೂ ಭಾರತೀಯ ಋಷಿಮುನಿಗಳು ಯೋಗವನ್ನು ತಮ್ಮ ಬದುಕಿನಲ್ಲಿ ರೂಡಿಸಿಕೊಂಡು ಜಗತ್ತಿಗೆ ಅದರ ಮಹತ್ವವನ್ನು ತಿಳಿಸಿದ್ದಾರೆ, ಯೋಗವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಯೋಗದಿಂದ ಹಲವು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆಧುನಿಕ ಒತ್ತಡದ ಬದುಕಿನಲ್ಲಿ ರೋಗ ಮುಕ್ತ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯವಶ್ಯಕ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು,
ಅವರು ಅಥಣಿ ಪಟ್ಟಣದಲ್ಲಿ ಯೋಗಶಾಸ್ತ್ರದಲ್ಲಿ ಪಿಎಚ್ ಡಿ ಪದವಿ ಪೂರೈಸಿದ ಡಾ. ಜಗದೀಶ ಮಿರಜಕರ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು ಭಾರತೀಯ ಸಂಸ್ಕøತಿಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನವಿದೆ. ಇಂದಿನ ಒತ್ತಡದ ಬದುಕಿಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಬಹಳಷ್ಟು ಸಹಾಯಕಾರಿಯಾಗಿದೆ ಎಂದರು, ಅಭಿನಂದನಾ ಸನ್ಮಾನ ಸ್ವೀಕರಿಸಿದ ಡಾ. ಜಗದೀಶ ಮಿರಜಕರ ಮಾತನಾಡಿ ವೈದ್ಯಕೀಯ ಸೇವೆಯಲ್ಲಿ ನಾವು ರೋಗಿಗಳಿಗೆ ತಾತ್ಕಾಲಿಕ ಆರೋಗ್ಯವನ್ನು ನೀಡಿದರೆ ಯೋಗಶಾಸ್ತ್ರದಲ್ಲಿ ಮತ್ತು ಆಯುರ್ವೇದ ಪದ್ಧತಿಯಲ್ಲಿ ರೋಗಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ. ಯೋಗವನ್ನ ನಾನು ಮೈಗೂಡಿಸಿಕೊಂಡು ಯೋಗಶಾಸ್ತ್ರದ ಪಿಎಚ್‍ಡಿ ಪದವಿ ಪೂರೈಸಿದ್ದು ಖುಷಿ ತಂದಿದೆ. ಈ ಸಂದರ್ಭದಲ್ಲಿ ನಮ್ಮ ಗೆಳೆಯರ ಬಳಗದವರು ಅಭಿನಂದನ ಸಮಾರಂಭ ಏರ್ಪಡಿಸಿ ಗೌರವ ಸನ್ಮಾನ ನೀಡಿದ್ದಕ್ಕಾಗಿ ತಮ್ಮೆಲ್ಲರಿಗೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.
ಶೆಟ್ಟರ ಮಠದ ಶ್ರೀ ಮರುಳುಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ರಾಯಬಾಗ ಮಾಜಿ ಶಾಸಕ ಬಿ.ಸಿ. ಸರಿಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿದ್ದ ಖ್ಯಾತ ಚಿಕ್ಕ ಮಕ್ಕಳ ತಜ್ಞ ಡಾ. ಪಿ ಪಿ ಮೀರಜ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾವೀರ ಪಡನಾಡ, ಡಾ. ರವಿ ಪಾಂಗಿ, ಯೋಗ ಶಿಕ್ಷಕ ಎಸ್. ಕೆ. ಹೊಳೆಪ್ಪನವರ, ಸಂಜಯ ನಿಂಬಾಳಕರ, ಡಾ .ಆರ್ ಎಸ್ ದೊಡ್ಡನಿಂಗಪ್ಪಗೋಳ, ಡಿ ಡಿ ಮೇಕನಮರಡಿ, ಸಂಗಮೇಶ ಹಚಡದ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಅಥಣಿ ಪಟ್ಟಣದ ವೈದ್ಯರಾಗಿ, ಅನೇಕ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನ ತೊಡಗಿಸಿ ಕೊಂಡಿರುವ ಡಾ. ಜಗದೀಶ ಮಿರಜಕರ ಅವರು ಯೋಗಶಾಸ್ತ್ರದಲ್ಲಿ ಪಿಎಚ್‍ಡಿ ಪದವಿ ಪೂರೈಸಿದ್ದು, ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ತಾಲೂಕಿನ ಜನತೆಗೆ ವೈದ್ಯಕೀಯ ಸೇವೆ ಜೊತೆಗೆ ಯೋಗಾಭ್ಯಾಸ ಸಲಹೆಗಳು ದೊರಕಲಿ ಎಂದು ಹೇಳಿದರು.