ಯೋಗದಿಂದ ದೇಹ, ಮನಸ್ಸು ಆರೋಗ್ಯ: ಅರುಣಕುಮಾರ್ ಮಹಾಶೆಟ್ಟಿ

ಕಲಬುರಗಿ,ಜೂ.21:ದೇಹ ಮತ್ತು ಮನಸ್ಸನ್ನು ಸಮಾಭಾವದಿಂದ ಇಟ್ಟಕೊಳ್ಳಲು ಯೋಗಾಭ್ಯಾಸ ಮಾಡಬೇಕು ಎಂದು ಯೋಗ ತರಬೇತಿದಾರ ಅರುಣಕುಮಾರ್ ಮಹಾಶೆಟ್ಟಿ ಅವರು ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಜರುಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಯೋಗಕ್ಕೆ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಶಕ್ತಿ ಇದೆ. ಭಾರತ ದೇಶವು ಯೋಗ ವಿದ್ಯೆಯಲ್ಲಿ ಇಡೀ ಪ್ರಪಂಚಕ್ಕೆ ವಿಶ್ವಗುರುವಾಗಿದೆ ಎಂದರು.
ಆರೋಗ್ಯವನ್ನು ವೃದ್ಧಿಸುವ ಯೋಗವನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡಿ ಜೀವನದಲ್ಲಿ ರೂಢಿಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿರ ಹಾಗೂ ಸದೃಢವಾಗಿ ಇಟ್ಟುಕೊಳ್ಳಲು ಯೋಗ ಸಹಕಾರಿಯಾಗಿದೆ. ಪ್ರತಿದಿನ ಯೋಗ ಮಾಡುವುದರಿಂದ ಲವಲವಿಕೆಯಿಂದ ಇರಲು ಸಾಧ್ಯ ಎಂದು ಹೇಳಿದ ಅವರು, ಕೆಲವು ಪ್ರಾಣಯಾಮಗಳನ್ನು ವಿದ್ಯಾರ್ಥಿನಿಯರಿಂದ ಮಾಡಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರ್ ಅವರು ಮಾತನಾಡಿ, ಯೋಗದ ಮಹತ್ವ ಮತ್ತು ಯೋಗದಿಂದ ರೋಗಮುಕ್ತವಾಗಿರಬಹುದು. ಡಾ. ಅಪ್ಪ ಅವರು ಮತ್ತು ಡಾ. ಅವ್ವಾಜಿಯವರು ವಿದ್ಯಾರ್ಥಿನಿಯರು ಸದೃಢರಾಗಬೇಕೆಂದು ಯೋಗ ತರಬೇತಿ ನೀಡಲು ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶರಣಬಸವೇಶ್ವರ್ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಶೇರಿಕಾರ್, ಐಕ್ಯೂಎಸಿ ಸಂಯೋಜಕಿ ಡಾ. ಪುಟ್ಟಮಣಿ ದೇವಿದಾಸ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ದಿಶಾ ಮೆಹತಾ, ಶ್ರೀಮತಿ ಕಲ್ಪನಾ ಡಿ., ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಯೋಗ ಪ್ರಾತ್ಯೇಕ್ಷಿಕೆ ಪ್ರದರ್ಶನ ನೀಡಿದರು. ಕು. ಚಂದ್ರಕಲಾ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.