ಯೋಗದಿಂದ ಒತ್ತಡ ನಿವಾರಣೆ

ಹುಳಿಯಾರು, ಜೂ. ೨೪- ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದು, ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದರಿಂದ ಮುಕ್ತಿ ಪಡೆಯಲು ನಿತ್ಯ ಒಂದು ಗಂಟೆಯಾದರೂ ಯೋಗಾಭ್ಯಾಸದಲ್ಲಿ ತೊಡಗಬೇಕು ಎಂದು ಯೋಗ ಶಿಕ್ಷಕ ಎಚ್.ಡಿ.ದುರ್ಗರಾಜು ತಿಳಿಸಿದರು.
ಹುಳಿಯಾರಿನ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿ ಅವರು ಮಾತನಾಡಿದು.
ಹುಳಿಯಾರು, ಕೆಂಕೆರೆ, ಕೋಡಿಪಾಳ್ಯದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಉಚಿತವಾಗಿ ಹೇಳಿಕೊಡಲಾಗುತ್ತಿದ್ದು ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯುವಂತೆ ಅವರು ತಿಳಿಸಿದರು.
ಶಾಲಾ ಮುಖ್ಯಾಸ್ಥ ಅಶೋಕ್‌ಮೂರ್ತಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನವೂ ಯೋಗಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನ ನಡೆಸಬಹುದು. ಸದೃಢ ದೇಹ, ಉತ್ತಮ ಆರೋಗ್ಯ, ಏಕಾಗ್ರತೆ ಹಾಗೂ ಸಮಚಿತ್ತಕ್ಕಾಗಿ ಯೋಗವು ಮದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಶಿಕ್ಷಕ ಪ್ರದೀಪ್ ಮಾತನಾಡಿ, ಯೋಗವು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆಗ ಮಾತ್ರ, ಅದರ ನಿಜವಾದ ಅನುಕೂಲಗಳು ನಮ್ಮ ಅರಿವಿಗೆ ಬರುತ್ತವೆ. ಹಾಗಾಗಿ, ಯೋಗಾಭ್ಯಾಸ ನಮ್ಮ ದೈನಂದಿನ ಚಟುವಟಿಕೆಯಾಗಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ರಜಿನಿ, ಮೇಘನಾ, ರಿಜ್ವಾನ್, ಪವಿತ್ರಾ, ವಿದ್ಯಾ, ಚೈತ್ರ, ತಸ್ಮಿಯಾ ಮತ್ತಿತರರು ಉಪಸ್ಥಿತರಿದ್ದರು.