ಯೋಗದಿಂದ ಆರೋಗ್ಯ ಸಮೃದ್ಧಿ

ಮುನವಳ್ಳಿ, ನ23 ಃ ಪಟ್ಟಣದ ಸೋಮಶೇಖರ ಮಠದಲ್ಲಿ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಯೋಗಪಟು ಕಾರ್ತಿಕ ಬೆಲ್ಲದ ಅವರು ಮಹಿಳೆಯರಿಗೆ ಉಚಿತ ಯೋಗ ತರಬೇತಿ ಶಿಬಿರ ಆಯೋಜಿಸಿದ್ದು ಶನಿವಾರದಂದು ಸಮಾರೋಪ ಸಮಾರಂಭ ಜರುಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಗಮೇಶ ದೇವರು, “ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ. ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳಬಹುದು. ರಕ್ತದ ಒತ್ತಡ, ತೂಕ ಕಡಿಮೆ ಮಾಡಿಕೊಳ್ಳುವುದು, ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿ ಇಡುವಲ್ಲಿ ಯೋಗ ಸಕಾರಾತ್ಮಕವಾದ ಪರಿಣಾಮವನ್ನು ನೀಡುವುದರಿಂದ ಇಂದು ಜಗತ್ತಿನಾದ್ಯಂತ ಯೋಗ ತನ್ನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ನಮ್ಮ ದೇಶದ ಸಂಸ್ಕøತಿಯಲ್ಲಿ ಯೋಗಕ್ಕೆ ಪುರಾತನದಿಂದಲೂ ಮಹತ್ವ ನೀಡುತ್ತ ಬಂದಿರುವರು”ಎಂದು ಯೋಗದ ಮಹತ್ವ ಕುರಿತು ತಿಳಿಸಿದರು.
ಯೋಗಪಟು ಕಾರ್ತಿಕ ಬೆಲ್ಲದ ಮಾತನಾಡಿ “ ದೈನಂದಿನ ಆರೋಗ್ಯದಲ್ಲಿ ಯೋಗದ ಮಹತ್ವವೇನು. ನಿತ್ಯದ ಬದುಕಿನಲ್ಲಿ ಹಂತ ಹಂತವಾಗಿ ಅಳವಡಿಸಿಕೊಳ್ಳಬೇಕಾದ ಆಸನಗಳು. ಅದರಲ್ಲೂ ಮಹಿಳೆಯರು ದೈನಂದಿನ ಬದುಕಿನಲ್ಲಿ ಮಾಡಬೇಕಾದ ಆಸನಗಳು ಅವುಗಳ ಮಹತ್ವ”ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಯೋಗ ತರಬೇತಿ ಶಿಬಿರದಲ್ಲಿ ಇಪ್ಪತ್ತೈದು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸೋಮಶೇಖರ ಮಠದಿಂದ ಗುರುರಕ್ಷೆಯನ್ನು ಹಾಗೂ ಪಾಲ್ಗೊಂಡ ಮಹಿಳಿಯರು ಸೇರಿ ಕಾರ್ತಿಕ್ ಬೆಲ್ಲದ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಬಿ.ಬಿ.ಹುಲಿಗೊಪ್ಪ ನಿರೂಪಿಸಿದರು. ಎಸ್.ಪಿ.ಜೆ.ಜಿ.ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಎ.ಪಿ.ಲಂಬೂನವರ, ಯೋಗ ಶಿಕ್ಷಕ ಪಾಟೀಲ ಶಿಕ್ಷಕರು ಇತರರು ಉಪಸ್ಥಿತರಿದ್ದರು.