ಯೋಗಥಾನ ಕಾರ್ಯಕ್ರಮದ ಮೂಲಕ ಸರ್ಕಾರದಿಂದ ಆರೋಗ್ಯದ ಕೊಡುಗೆ

ರಾಯಚೂರು,ಜ.೧೬- ಕೇಂದ್ರ ಸರ್ಕಾರವು ರಾಷ್ಟ್ರದಾದ್ಯಂತ ಯೋಗಥಾನ ಕಾರ್ಯಕ್ರಮದ ಮೂಲಕ ಆರೋಗ್ಯದ ಕೊಡುಗೆಯನ್ನು ನೀಡುತ್ತಿದ್ದು, ಈ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿರುವುದು ಶ್ಲಾಘನೀಯ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರು ಜ.೧೫ರ(ಭಾನುವಾರ) ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಂಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಿನ್ನಿಸ್ ದಾಖಲೆ ಯೋಗಥಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಯೋಗದಿಂದ ಕೇವಲ ಶಾರೀರಿಕ ಆರೋಗ್ಯ ವೃದ್ಧಿಸುವುದಲ್ಲದೇ ಮಾನಸಿಕ ಆರೋಗ್ಯವು ವೃದ್ಧಿಯಾಗುತ್ತದೆ. ಆದ್ದರಿಂದ ಯೋಗವು ಮನುಷ್ಯನ ಜೀವನದಲ್ಲಿ ಅತ್ಯಂತ ಮುಖ್ಯವಾಗಿದ್ದು, ಯೋಗವು ಕೇವಲ ಇಂದಿಗೆ ಮಾತ್ರ ಸೀಮಿತವಾಗದೇ ಪ್ರತಿಯೊಬ್ಬರು ದಿನನಿತ್ಯವೂ ಯೋಗ ಮಾಡುವ ಮೂಲಕ ಆರೋಗ್ಯವಂತರಾಗಬೇಕು ಎಂದರು.
ಕೇಂದ್ರ ಸರ್ಕಾರವು ಯೋಗಥಾನ ಕಾರ್ಯಕ್ರಮದ ಮೂಲಕ ದೇಶದ ಪ್ರತಿಯೊಬ್ಬರಿಗೂ ಆರೋಗ್ಯದ ಕೊಡುಗೆಯನ್ನು ನೀಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಉತ್ಸುಕದಿಂದ ಆಗಮಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಯೋಗ ಬೋದಕರ ಹುದ್ದೆಗೆ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಇದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಪ್ರತಿಯೊಬ್ಬರು ಯೋಗಥಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದು ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಾವಿರಾರು ವಿದ್ಯಾರ್ಥಿಗಳು ಭಾಗಿ: ಗಿನ್ನಿಸ್ ವಿಶ್ವದಾಖಲೆ ಯೋಗಥಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆನ್‌ಲೈನ್ ಮೂಲಕ ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿತ್ತು, ಅದರಂತೆ ಬೆಳಿಗ್ಗೆ ೦೫:೩೦ರಿಂದ ೦೭:೩೦ರವರೆಗೆ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ನೊಂದಣಿ ಮಾಡಿಕೊಂಡವರ ಕ್ಯೂ.ಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಅದರಂತೆ ನಗರದ ಒಟ್ಟು ೩೨ ಶಾಲೆಗಳಿಂದ ಒಟ್ಟು ೬,೫೫೭ ವಿದ್ಯಾರ್ಥಿಗಳು ಯೋಗಥಾನ ಕಾರ್ಯಕ್ರಮಕ್ಕಾಗಿ ನೊಂದಾಯಿಸಿಕೊಂಡು ಯೋಗಥಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಲ್ಲದೇ ಜಿಲ್ಲಾ ಮಟ್ಟದ ಅಧಿಕಾರಿಗಳು, ದೈಹಿಕ ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಸೇರಿ ಅಂದಾಜು ೭,೫೦೦ ಜನರು ಯೋಗಥಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಆದರ್ಶ ಮೂರ್ತಿ ಸ್ವಾಮಿ ವಿವೇಕಾನಂದರ ನುಡಿಮುತ್ತುಗಳನ್ನು ಬಿಡುಗಡೆಗೊಳಿಸಲಾಯಿತು. ಯೋಗಥಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಶಾಲೆಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯ ಉಪನಿರ್ದೇಶಕ ವೃಷಬೇಂದ್ರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ, ನಗರಸಭೆ ಅಧ್ಯಕ್ಷ ಗುರುಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಶಂಕರಗೌಡ ಪಾಟೀಲ್, ಯೋಗ ತರಬೇತುದಾರ ತಿಮ್ಮಪ್ಪ ವಡ್ಡೆಪಲ್ಲಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.