ಯೋಗಥಾನ್:25 ಸಾವಿರ ಯೋಗ ಪಟುಗಳು ಭಾಗಿ

ವಿಜಯಪುರ,ಜ.16-ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಸೈನಿಕ ಶಾಲೆ ಮೈದಾನದಲ್ಲಿರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ಪ್ರಮಾಣದ ಯೋಗಥಾನ್ ಯೋಗ ಪ್ರದರ್ಶನ ಹಮ್ಮಿ ಕೊಳ್ಳಲಾಗಿತ್ತು.
25 ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ವಿವಿಧ ಇಲಾಖೆ ಅಧಿಕಾರಿಗಳು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಎಸ್ಪಿ ಆನಂದಕುಮಾರ, ಸಿಇಒ ರಾಹುಲ್ ಸಿಂಧೆ, ಸೈನಿಕ ಶಾಲೆಯ ಮುಖ್ಯಸ್ಥೆ ಪ್ರತಿಭಾ ಬಿಸ್ಮಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಏಕಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಿದರು.
ಸೈನಿಕ ಶಾಲೆಯ ಮೈದಾನದಲ್ಲಿ ಒಟ್ಟು ಯೋಗಾಸನ ಮಾಡಲು ಒಟ್ಟು 9 ಬ್ಲಾಕ್ ಮಾಡಲಾಗಿತ್ತು. ಪ್ರತಿ ಬ್ಲಾಕ್ ನಲ್ಲಿ ಸುಮಾರು 2 ಸಾವಿರ ಯೋಗಪಟುಗಳು ತಮ್ಮ ಯೋಗ ಪ್ರರ್ದಶನ ತೋರಿಸಿದರು. ಯೋಗ ಪಟು ಬಸನಗೌಡ ಹೊರನಾಳ ನೇತ್ವತೃದಲ್ಲಿ ಈ ಯೋಗಾಶನದ ಯೋಗಥಾನ್ ಹಮ್ಕಿಕೊಳ್ಳಲಾಗಿತ್ತು. ಯೋಗಥಾನ್‍ವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಯೋಗ ದೇಹದ ಆರೋಗ್ಯ ಕಾಪಾಡಲು ಪೂರಕವಾಗಿದೆ. ಹಿಂದಿನ ಕೇಂದ್ರದಲ್ಲಿದ್ದ ಸರ್ಕಾರಗಳು ಈ ಬಗ್ಗೆ ಚಿಂತಿಸಲಿಲ್ಲ, ಆದರೆ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ವಿಶ್ವ ಸಂಸ್ಥೆಯಲ್ಲಿ ಯೋಗ ದಿನಾಚರಣೆ ಕುರಿತು ಪ್ರಸ್ತಾವನೆ ಸಲ್ಲಿಸಿ, ಈಗ ಇಡಿ ಜಗತ್ತು ಯೋಗದಿನ ಆಚರಣೆ ಮಾಡುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಯೋಗಥಾನವನ್ನು ಕರ್ನಾಟಕದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಈ ಬಾರಿ ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಆಚರಿಸಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 25 ಸಾವಿರ ಯೋಗಪಟುಗಳು ಯೋಗಥಾನದಲ್ಲಿ ಭಾಗವಹಿಸಿದ್ದಾರೆ. ಗಿನ್ನಿಸ್ ದಾಖಲೆಯನ್ನು ಕರ್ನಾಟಕ ಈ ಬಾರಿ ದಾಖಲಿಸಲು ವಿಜಯಪುರ ಜಿಲ್ಲೆಯ ಕೊಡುಗೆ ಹೆಚ್ಚಿದೆ ಎಂದರು.
ಎಲ್ಲಿ ನೋಡಿದರಲ್ಲಿ ಯೋಗ ಪಟುಗಳು ನಡೆಸಿದ ಯೋಗ ಪ್ರದರ್ಶನ ಕಣ್ಮನ ಸೆಳೆಯಿತು.