ಯೋಗತ್ಥಾನ್-2022ಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ವಿಜಯಪುರ ಜು.18- ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಹತ್ವದ ಕಾರ್ಯಕ್ರಮವಾದ ಯೋಗತ್ಥಾನ್-2022ಕ್ಕೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಜುಲೈ 17ರಂದು ನಗರದ ಡಾ.ಬಿ.ಎನ್.ಎಮ್ ಆಯುರ್ವೇದ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಯೋಗವು ನಮ್ಮ ದೇಶದ ಪರಂಪರೆ, ಸಂಸ್ಕøತಿ ಮತ್ತು ಹಿರಿಮೆಯಾಗಿದೆ. ಪುರಾತನ ಕಾಲದಿಂದಲೂ ಯೋಗ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದೇವೆ. ಯೋಗ ಮಾಡುತ್ತಿದ್ದ ರುಷಿಮುನಿಗಳು ಶತಾಯುಷಿಗಳಾಗಿ ಬದುಕಿ ನಮಗೆ ಮಾದರಿಯಾಗಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಹೆಚ್ಚು ಪ್ರಚಲಿತಗೊಳಿಸುವ ಪ್ರಯತ್ನ 2015ರಿಂದ ಆರಂಭಗೊಂಡಿತು. ನಮ್ಮ ದೇಶದ ಮಾನ್ಯ ಪ್ರಧಾನಮಂತ್ರಿಗಳ ಆಶಯದಂತೆ, ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ ಮಾಡುವ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಎಲ್ಲ ದೇಶಗಳು ಸಹಮತಿ ಸೂಚಿಸಿದ್ದರಿಂದ 2015ರಿಂದ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತ ಬಂದಿದ್ದೇವೆ. ಯೋಗತ್ಥಾನ ಕಾರ್ಯಕ್ರಮವನ್ನು ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ನಡೆಸಲು ಕೇಂದ್ರ ಸರ್ಕಾರವು ನಿರ್ದೇಶನ ನೀಡಿತ್ತು. ಅಂತೆಯೇ ಕರ್ನಾಟಕ ರಾಜ್ಯದ ನಾಲ್ಕು ಸ್ಥಳಗಳ ಪೈಕಿ ವಿಜಯಪುರದ ಗೋಲಗುಂಬಜ್ ಕೂಡ ಒಂದಾಗಿತ್ತು ಎಂಬುದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಯೋಗದಲ್ಲಿ ಜನತೆಯನ್ನು ಸೇರಿಸಲು ಜಿಲ್ಲೆಗೆ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಿ ಯಶಸ್ವಿಗೊಳಿಸಿದ್ದೇವೆ ಎಂದು ತಿಳಿಸಿದರು.
ಆಗಸ್ಟ್ 27ರಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮತ್ತು ಆಗಸ್ಟ್ 28ರಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ ಎರಡು ಬೃಹತ್ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರದ ಚಿಂತನೆಯ ಮೇರೆಗೆ ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಿ ಸಿದ್ಧತೆ ನಡೆಸಿದ್ದೇವೆ. ತಾವು ಈಗಾಗಲೇ ಸೂಚನೆ ನೀಡಿದ್ದಂತೆ ಪ್ರತಿ ಭಾನುವಾರ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ನಾನಾ ಪ್ರಕಾರದ ಯೋಗಗಳ ಬಗ್ಗೆ ತಿಳಿಸುವ, ತರಬೇತಿಗಳು ನಡೆಯುತ್ತಿವೆ ಎಂದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಎಸ್.ಜಿ.ಲೋನಿ ಅವರು ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಅನುರಾಧ ಎಲ್. ಚಂಚಲಕರ, ಸೈನಿಕ ಕಾಲೇಜಿನ ಪ್ರಾಚಾರ್ಯರಾದ ಪ್ರತಿಭಾ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ, ಎನ್ಸೆಸ್ಸೆಸ್ ಅಧಿಕಾರಿ ಡಾ.ಬಿ.ಎಂ.ಕುರುಬು, ಆಯುಷ್ ಟಿವಿ ನೋಡಲ್ ಅಧಿಕಾರಿ ಶ್ರೀನಿವಾಸ ಗುರುಬಲ, ಯೋಗ ಶಿಕ್ಷಕಿ ಲಕ್ಷ್ಮಿ ತದಳಗಿ ಹಾಗು ಇತರರು ಇದ್ದರು. ನಾಗೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಕೆ.ಬಿ.ನಾಗೂರ (ಬಾಬು) ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಶರಣಬಸವೇಶ್ವರ ನುಚ್ಚಿ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ 800ಕ್ಕಿಂತ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು.