ಯೂರಿಯಾ ರಸಗೊಬ್ಬರ ದುರುಪಯೋಗ ತಡೆಗೆ ಕ್ರಮ

ಬಾಗಲಕೋಟೆ,ಏ.20 : ಕೃಷಿ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಸಬ್ಸಿಡಿ ಯೂರಿಯಾವನ್ನು ಬಳಸುವದನ್ನು ತಡೆಯುವುದು ಅವಶ್ಯವಾಗಿದ್ದು, ಯೂರಿಯಾ ರಸಗೊಬ್ಬರವು ದುರುಪಯೋಗವಾಗದಂತೆ ತಡೆಯಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರ ಹಂಚಿಕೆ, ದಾಸ್ತಾನು ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಯೂರಿಯಾ ಬಳಸುತ್ತಿರುವ ಕೈಗಾರಿಕೆಗಳನ್ನು ಗುರುತಿಸಿ, ಯೂರಿಯಾ ಬಳಕೆಯಾಗುತ್ತಿರುವ ಬಗ್ಗೆ ಪತ್ತೆ ಹಚ್ಚುವ ಕೆಲಸವಾಗಬೇಕು. ಇದಕ್ಕಾಗಿ ಪೋಲಿಸ್, ಕೈಗಾರಿಕೆ, ಕೃಷಿ ಇಲಾಖೆಗಳನ್ನೊಳಗೊಂಡ ತಂಡ ರಚಿಸಿ ಪ್ರಕರಣಗಳನ್ನು ಪತ್ತೆ ಹಚ್ಚಿ ಅಂತಹ ಕೈಗಾರಿಕೆಗಳ ಪರವಾನಿಗೆಯನ್ನು ರದ್ದುಪಡಿಸಲು ಕ್ರಮವಹಿಸಲು ಸೂಚಿಸಿದರು.
ಪಶು ಮತ್ತು ಕೋಳಿ ಆಹಾರದಲ್ಲಿ ಪ್ರೋಟೀನ್ ಬದಲಾಗಿ, ಬಣ್ಣಗಳಲ್ಲಿ, ಸಕ್ಕರೆ, ಮೊಲಾಸಸ್ ಅಲ್ಕೋಹಾಲ್ ಪರಿವರ್ತನೆಯಲ್ಲಿ ಕಚ್ಚಾ ವಸ್ತುವಾಗಿ, ಜವಳಿ ಬಣ್ಣ ಅಥವಾ ಮುದ್ರಣಕ್ಕಾಗಿ ಡೈ ತಯಾರಿಕೆಯಲ್ಲಿ, ಸೋಪು ತಯಾರಿಕೆಯಲ್ಲಿ, ಯೂರಿಯಾ ಫಾರ್ಮಾಲ್ಡಿಹೈಡ್ ಅವಶೇಷಗಳನ್ನು ಪ್ಲೈವುಡ್ ಮತ್ತು ಪಾರ್ಟಿಕಲ್ ಬೋರ್ಡ ಉದ್ಯಮದಲ್ಲಿ ಅಂಟಿಕೊಳ್ಳುವ ಮತ್ತು ಮೇಲ್ಮೆ ಲೇಪನಕ್ಕಾಗಿ, ಅಡುಗೆ ಪಾತ್ರೆಗಳು, ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಯೂರಿಯಾ ಬಳಸಲಾಗುತ್ತಿದ್ದು, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸವಾಗಬೇಕು ಎಂದರು.
ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಲು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯನ್ನು ತಡೆಯಬೇಕಾಗದ ಅವಶ್ಯಕತೆ ಇದೆ. ರೈತರ ಹಿತದೃಷ್ಠಿ ಕಾಪಾಡಲು ಯೂರಿಯಾ ದುರುಪಯೋಗವಾಗುವದನ್ನು ತಡೆಯಲು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಯೂರಿಯಾ 8400 ಮೆಟ್ರಿಕ್ ಟನ್, ಡಿಎಪಿ 2549 ಮೆಟ್ರೆಕ್ ಟನ್, ಕಾಂಪ್ಲೇಕ್ಸ್ 2043 ಮೆಟ್ರಿಕ್ ರಸಗೊಬ್ಬರಗಳ ಕಾಪು ದಾಸ್ತಾನು ಅವಶ್ಯಕತೆ ಇದ್ದು, ಸಂಗ್ರಹಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ಕೆಎಸ್‍ಸಿಎಂಎಫ್, ಕೆಎಸ್‍ಎಸ್‍ಸಿ ಪ್ರತಿನಿಧಿಗಳಿಗೆ ಸೂಚಿಸಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಯೂರಿಯಾ, ಡಿಎಪಿ, ಕಾಂಪ್ಲೇಕ್ಸ್, ಎಂ.ಒ.ಪಿ, ಎಸ್.ಎಸ್.ಪಿ ರಸಗೊಬ್ಬರ ಬೇಡಿಕೆಗೆ ತಕ್ಕಂತೆ ಹಂಚಿಕೆ ಮತ್ತು ಪೂರೈಕೆ ರಸಗೊಬ್ಬರದ ಕಂಪನಿಗಳು ಶೆಡ್ಯೂಲ್ ಪ್ರಕಾರ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಹಂಚಿಕೆ ಮತ್ತು ಪೂರೈಕೆಯಲ್ಲಿ ತೊಂದರೆಯಾದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು. ವಿವಿಧ ರಸಗೊಬ್ಬರಗಳ ದರ ಪರಿಷ್ಕರಿಸಲಾಗಿದ್ದು, ಹಳೆಯ ರಸಗೊಬ್ಬರದ ಸಂಗ್ರಹದ ಬಗ್ಗೆ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಟ್ಟಿಮನಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಂ.ಚಳಗೇರಿ, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ಗೋಪಾಲರೆಡ್ಡಿ ಸೇರಿದಂತೆ ಆಯಾ ತಾಲೂಕಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.