ಯೂರಿಯಾ ಗೊಬ್ಬರ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

ಶಿರಹಟ್ಟಿ,ಜು.14: ಬುಧವಾರ ಶಿರಹಟ್ಟಿಯಲ್ಲಿ ಸಮರ್ಪಕ ಯೂರಿಯಾ ಗೊಬ್ಬರ ಪೂರೈಸಬೇಕೆಂದು ಆಗ್ರಹಿಸಿ ರೈತರು ಕೃಷಿ ಇಲಾಖೆ ಕಚೇರಿಯ ಎದುರುಗಡೆ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಲ್ಲಿಗೇರಿಯ ರೈತ ಮುಖಂಡ ಹನುಮಂತಪ್ಪ ಹುಯಿಲಗೋಳ, ತಾಲೂಕಿನಾದ್ಯಂತ ಇರುವಂತಹ ರೈತ ವರ್ಗಕ್ಕೆ ಸಧ್ಯ ಯೂರಿಯಾ ಗೊಬ್ಬರ ಅವಶ್ಯವಿರುವದರಿಂದ ಸಮರ್ಪಕವಾಗಿ ದೊರಕುತ್ತಿಲ್ಲ. ಕೃಷಿ ಚಟುವಟಿಕೆಗಳನ್ನು ಬಿಟ್ಟು ಗೊಬ್ಬರಕ್ಕಾಗಿ ದಿನಗಟ್ಟಲೇ ಕಾಯಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಮಾರಾಟವಾಗುತ್ತಿರುವ ಬಗ್ಗೆ ರೈತರು ಹೇಳುತ್ತಿದ್ದಾರೆ. ಆದ್ದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಎಲ್ಲ ರೈತರಿಗೂ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸುವುದಕ್ಕೆ ಕ್ರಮ ವಹಿಸಬೇಕು. ಇಲ್ಲದೇ ಹೋದಲ್ಲಿ ರೈತರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೆಶಕ ಮಹೇಶ ಬಾಬು, ಜುಲೈ 12 ಹಾಗೂ 13ರಂದು ಶಿರಹಟ್ಟಿ ತಾಲೂಕಿಗೆ 110 ಟನ್ ಯೂರಿಯಾ ಗೊಬ್ಬರ ಬಂದಿದ್ದು, 2-3ದಿನಗಳಲ್ಲಿ ಆರ್‍ಸಿಎಫ್ ಹಾಗೂ ಕೋರಮಂಡಲ ಸಂಸ್ಥೆಯಿಂದ ಯೂರಿಯಾ ಗೊಬ್ಬರ ಬರಲಿದೆ ಎಂದರು.