ಯೂಟ್ಯೂಬ್‌ನಲ್ಲಿ ತಾಂತ್ರಿಕ ಸಮಸ್ಯೆ

ವಾಷಿಂಗ್ಟನ್, ಜೂ.೨೩- ಜಗತ್ತಿನ ಬಹುತೇಕ ಜನರ ನೆಚ್ಚಿನ ಆನ್‌ಲೈನ್ ವೀಡಿಯೊ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಆಲ್ಫಾಬೆಟ್ ಸಂಸ್ಥೆಯ ಯೂಟ್ಯೂಬ್ ನಿನ್ನೆ ಕೆಲಹೊತ್ತು ತಾಂತ್ರಿಕ ಸಮಸ್ಯೆಯಿಂದ ಅಡಚಣೆ ಏರ್ಪಟ್ಟ ಘಟನೆ ನಡೆದಿದೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿನ ಯೂಟ್ಯೂಬ್ ಹಾಗೂ ಯೂಟ್ಯೂಬ್ ಟಿವಿ ಬಳಕೆದಾರರು ಕೆಲಹೊತ್ತು ತೊಂದರೆ ಅನುಭವಿಸಿದರು.
ಈ ಬಗ್ಗೆ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡಿಟೆಕ್ಟರ್.ಕಾಮ್ ವರದಿ ಮಾಡಿದ್ದು, ರಾತ್ರಿ ವೇಳೆ ಸುಮಾರು ೮:೦೦ ಗಂಟೆಯ ವೇಳೆಗೆ ೧೩,೦೦೦ ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಾರೆ ಎಂದು ಡೌನ್‌ಡಿಟೆಕ್ಟರ್ ತೋರಿಸಿದೆ. ಅದೂ ಅಲ್ಲದೆ ಯೂಟ್ಯೂಬ್ ಟಿವಿಯಲ್ಲಿ ಸುಮಾರು ೩ ಸಾವಿರ ಬಳಕೆದಾರರು ಸಮಸ್ಯೆಗಳ ಬಗ್ಗೆ ದೂರಿಕೊಂಡಿದ್ದಾರೆ ಎನ್ನಲಾಗಿದೆ. ಡಿಟೆಕ್ಟರ್ ವೆಬ್‌ಸೈಟ್‌ನಲ್ಲಿ ಒಬ್ಬ ಬಳಕೆದಾರರು, ಯೂಟ್ಯೂಬ್ ಟಿವಿಯನ್ನು ಹೊರತುಪಡಿಸಿ ನಾನು ಬಳಸುವ ಎಲ್ಲಾ ಟಿವಿ ಸ್ಟ್ರೀಮಿಂಗ್ ಸೇವೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಯೂಟ್ಯೂಬ್ ಟಿವಿ ನಿರಂತರವಾಗಿ ಬಫರಿಂಗ್ ಕಾಣಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿದ್ದಾರೆ. ಇದೇ ರೀತಿಯ ಹಲವು ಬಳಕೆದಾರರು ಕೂಡ ಈ ಬಗ್ಗೆ ಸಮಸ್ಯೆ ಎದುರಿಸಿರುವ ಬಗ್ಗೆ ದೂರಿಕೊಂಡಿದ್ದಾರೆ.