ಯು.ಪಿ.ಎಸ್.ಸಿ.ಕೋಚಿಂಗ್ ಸೆಂಟರ್ ಪ್ರಾರಂಭ

ಕಲಬುರಗಿ,ಆ.2-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯವು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಡಾ. ಅಂಬೇಡ್ಕರ್ ಸೆಂಟರ್ ಆಫ್ ಎಕ್ಸಲೆನ್ಸ್ -ಯು.ಪಿ.ಎಸ್.ಸಿ. ಕೋಚಿಂಗ್ ಸೆಂಟರ್ ಅನ್ನು ಪ್ರಾರಂಭಿಸಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಮಂಜೂರಾದ ಈ ಯೋಜನೆಯ ಮೂಲ ಉದ್ದೇಶ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಅತ್ಯುತ್ತಮ ಕೋಚಿಂಗ್ ಸೌಲಭ್ಯದ ಮೂಲಕ ಸಜ್ಜುಗೊಳಿಸಲು ಅವರನ್ನು ಸಬಲೀಕರಣಗೊಳಿಸುವುದಾಗಿದೆ.
ಸಚಿವಾಲಯವು 100 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಕೋಚಿಂಗ್ ವಾತಾವರಣವನ್ನು ಒದಗಿಸಲು 75 ಲಕ್ಷಗಳನ್ನು ಮಂಜೂರು ಮಾಡಿದೆ. ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ, ಕೇಂದ್ರವು ಕೋಚಿಂಗ್ ಉಪಕ್ರಮವನ್ನು ಪ್ರಾರಂಭಿಸಲು ಸಜ್ಜಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯುತ್ತಮ ಕ್ರಮವಾಗಿದೆ.
ಯು.ಪಿ.ಎಸ್.ಸಿ ಕೋಚಿಂಗ್ ಪ್ರಕ್ರಿಯೆಯ ಭಾಗವಾಗಿ, ಯುಪಿಎಸ್ಸಿ ಕೋಚಿಂಗ್‍ಗೆ 100 ಆಕಾಂಕ್ಷಿಗಳನ್ನು ಆಯ್ಕೆ ಮಾಡಲು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಪ್ರವೇಶ ಪರೀಕ್ಷೆಯನ್ನು ನಡೆಸಿತು. ಪ್ರವೇಶ ಪರೀಕ್ಷೆಗೆ 563 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 283 ಅಭ್ಯರ್ಥಿಗಳು ಹಾಜರಾಗಿದ್ದರು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಭಾರತದ ವಿವಿಧ ಭಾಗಗಳಿಂದ ಬಂದವರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಕಲ್ಯಾಣ-ಕರ್ನಾಟಕ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. ಇದು ಪ್ರದೇಶಕ್ಕೆ ಹೆಚ್ಚು ಪೆÇ್ರೀತ್ಸಾಹದಾಯಕ ಸಂಕೇತವಾಗಿದೆ.
ಹೀಗಾಗಿ, ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯವು ಎಸ್‍ಸಿ ವಿದ್ಯಾರ್ಥಿಗಳ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಡಾ.ಅಂಬೇಡ್ಕರ್ ಸೆಂಟರ್ ಆಫ್ ಎಕ್ಸಲೆನ್ಸ್ ನ ಕಾರ್ಯಕ್ರಮ ಸಂಯೋಜಕರಾದ ಡಾ.ಸಂಗಮೇಶ್ ಯುಪಿಎಸ್ ಸಿ ಕೋಚಿಂಗ್ ಸೆಂಟರ್ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರವೇಶ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ನೋಡಲ್ ಅಧಿಕಾರಿ ಡಾ.ರಾಘವಯ್ಯ ಹಾಗು ಸಹಾಯಕ ನೋಡಲ್ ಅಧಿಕಾರಿ ಡಾ.ಬಾಬು ಎನ್ ವಹಿಸಿಕೊಂಡಿದ್ದರು.