
ಬೆಂಗಳೂರು, ಮೇ ೨೪- ೧೬ನೇ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಫರೀದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆಯಲ್ಲಿಂದು ನೂತನ ಸಭಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಕಾಂಗ್ರೆಸ್‌ನ ಯು.ಟಿ. ಖಾದರ್ ಫರೀದ್ ಸಭಾಧ್ಯಕ್ಷರಾಗಿ ಅವಿರೋಧವಾಗಿ ಚುನಾಯಿತರಾದರು.
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಯು.ಟಿ. ಖಾದರ್ ನಿನ್ನೆಯೇ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.
ವಿರೋಧ ಪಕ್ಷವಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಯಾರೂ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರಲಿಲ್ಲ. ಹಾಗಾಗಿ ಅವರ ಆಯ್ಕೆ ಅವಿರೋಧವಾಯಿತು.
ವಿಧಾನಸಭೆಯಲ್ಲಿ ಇಂದು ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ. ಖಾದರ್ ಅವರ ಹೆಸರನ್ನು ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಮೋದಿಸಿದರು.
ನಂತರ ಹಂಗಾಮಿ ಸಭಾಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಯು.ಟಿ. ಖಾದರ್ ಅವರನ್ನು ಸಭಾಧ್ಯಕ್ಷರಾಗಿ ಆಯ್ಕೆ ಮಾಡುವ ಪ್ರಸ್ತಾವವನ್ನು ಸದನದ ಮತಕ್ಕೆ ಹಾಕಿದ್ದು, ಸರ್ವಾನುಮತದಿಂದ ಅದಕ್ಕೆ ಸದನ ಒಪ್ಪಿಗೆ ನೀಡಿತು.
ನಂತರ ಹಂಗಾಮಿ ಸಭಾಧ್ಯಕ್ಷರು ನೂತನ ಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಫರೀದ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.
ಇದಾದ ಬಳಿಕ ನೂತನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭಾಧ್ಯಕ್ಷ ಪೀಠಕ್ಕೆ ಕರೆತಂದು ಅವರನ್ನು ಸಭಾಧ್ಯಕ್ಷರ ಸ್ಥಾನದಲ್ಲಿ ಕೂರಿಸಿದರು.
ಅಭಿನಂದನೆ
ನೂತನ ಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಫರೀದ್ ಸಭಾಧ್ಯಕ್ಷ ಪೀಠವನ್ನು ಅಲಂಕರಿಸುತ್ತಿದ್ದಂತೆಯೇ ಅವರನ್ನು ಅಭಿನಂದಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ. ಖಾದರ್ ಫರೀದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ರಾಜಕಾರಣದ ಕುಟುಂಬದಿಂದ ಬಂದವರು. ಅವರ ತಂದೆ ಯು.ಟಿ. ಫರೀದ್ ಅವರು ನಾಲ್ಕು ಬಾರಿ ಶಾಸಕರಾಗಿದ್ದರು. ಯು.ಟಿ. ಖಾದರ್ ಸಹ ೫ ಬಾರಿ ಶಾಸಕರಾಗಿದ್ದಾರೆ. ಉತ್ಸಾಹಿ, ಸಕ್ರಿಯ ರಾಜಕಾರಣಿ. ೨೦೧೨ರಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿ ಸದನ ವೀರ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಾದರಿ ಶಾಸಕರಾಗಿ ವಿರೋಧ ಪಕ್ಷದಲ್ಲಿದ್ದಾಗ ಉಪನಾಯಕರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಇಲ್ಲಿ ಇತ್ತೀಚೆಗೆ ಚರ್ಚೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತಿದೆ. ಖಾದರ್ ಅವರು ಸಭಾಧ್ಯಕ್ಷರಾಗಿ ಚರ್ಚೆಯ ಗುಣಮಟ್ಟವನ್ನು ಮೇಲ್ಮಟ್ಟಕ್ಕೆ ಒಯ್ಯಲಿ. ಸದನದಲ್ಲಿ ರಾಜ್ಯದ ಹಿತ, ಅಭಿವೃದ್ಧಿ, ಜನರ ರಕ್ಷಣೆ ಇವುಗಳ ಬಗ್ಗೆ ಚರ್ಚೆಗಳಾಗಲಿ. ಅವರ ಅಧ್ಯಕ್ಷತೆಯಲ್ಲಿ ನಾವೆಲ್ಲ ರಾಜ್ಯದ ಹಿತಕ್ಕಾಗಿ ಕೆಲಸ ಮಾಡೋಣ. ಸಂಸದೀಯ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಯು.ಟಿ. ಖಾದರ್ ಅವರು ಮಾಡಲಿ ಎಂದು ಶುಭ ಹಾರೈಸಿದರು.
ಸದನದಲ್ಲಿ ಅಸಂಸದೀಯ ಪದಗಳ ಬಳಕೆಗೆ ಅವಕಾಶವಾಗದಂತೆ ಆರೋಗ್ಯ ಪೂರ್ಣ ಚರ್ಚೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಖಾದರ್ ಅವರು ಸಭಾಧ್ಯಕ್ಷರ ಸ್ಥಾನಕ್ಕೆ ಅರ್ಹರು. ಅವರ ನಡವಳಿಕೆಯಿಂದ ಈ ಸ್ಥಾನ ಸಿಕ್ಕಿದೆ. ಅವರು ಎಲ್ಲೂ ಇದುವರೆಗೂ ಸಂಯಮ ಮೀರಿ ಕೋಪಗೊಂಡಿಲ್ಲ. ಎಲ್ಲವನ್ನೂ ಬುದ್ಧಿವಂತಿಕೆಯಿಂದ ನಿಭಾಯಿಸಿದ್ದಾರೆ. ಸದನವನ್ನು ಸಮರ್ಪಕವಾಗಿ ನಡೆಸುತ್ತಾರೆ ಎಂಬ ವಿಶ್ವಾಸವಿದೆ. ನಿಷ್ಪಕ್ಷಪಾತವಾಗಿ ಅವರು ಸಭಾಧ್ಯಕ್ಷರಾಗಿ ಕೆಲಸ ಮಾಡಲಿ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಸಭಾಧ್ಯಕ್ಷರ ಸ್ಥಾನ ಅತ್ಯಂತ ಶ್ರೇಷ್ಠವಾದ ಸ್ಥಾನ. ಈ ಹಿಂದೆ ವೈಕುಂಠ ಬಾಳಿಗ, ನಾಗರತ್ನಮ್ಮ, ರಮೇಶ್‌ಕುಮಾರ್, ಎಸ್.ಎಂ. ಕೃಷ್ಣ, ಜಗದೀಶ್ ಶೆಟ್ಟರ್ ಅವರಂತಹವರು ಈ ಸ್ಥಾನ ಅಲಂಕರಿಸಿದ್ದರು. ಖಾದರ್ ಅವರು ಯುವಕರಿದ್ದಾರೆ, ಸ್ನೇಹ ಜೀವಿ. ಅವರು ಸಭಾಧ್ಯಕ್ಷರಾಗಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಅವರು ಈ ಹುದ್ದೆಗಾಗಿ ಪಕ್ಷ ಹಾಗೂ ಅಧಿಕಾರವನ್ನು ತ್ಯಾಗ ಮಾಡಿದ್ದಾರೆ. ಅವರಿಗೆ ಅಭಿನಂದನೆ ಎಂದರು.
ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿ ಸಚಿವ ಡಾ.ಜಿ. ಪರಮೇಶ್ವರ್, ಬಿಜೆಪಿಯ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ಆರಗ ಜ್ಞಾನೇಂದ್ರ, ಜೆಡಿಎಸ್‌ಡನ ಜಿ.ಟಿ. ದೇವೇಗೌಡ, ಕಾಂಗ್ರೆಸ್‌ನ ಹೆಚ್.ಕೆ. ಪಾಟೀಲ್ ಮತ್ತಿತರರು ಮಾತನಾಡಿದರು.
ಧನ್ಯವಾದ
ಸದನದಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಪಕ್ಷದ ಸದಸ್ಯರುಗಳು ಸಭಾಧ್ಯಕ್ಷರಾಗಿ ತಮ್ಮನ್ನು ಆಯ್ಕೆ ಮಾಡಲು ಸಹಕರಿಸಿದ್ದಾರೆ. ಎಲ್ಲರಿಗೂ ಧನ್ಯವಾದ. ಸಭಾಧ್ಯಕ್ಷನಾಗಿ ಸದನದ ಘನತೆ, ಗೌರವವನ್ನು ಎತ್ತಿ ಹಿಡಿದು ಆರೋಗ್ಯ ಪೂರ್ಣ ಚರ್ಚೆಗೆ ಅವಕಾಶ ನೀಡಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದಾಗಿ ನೂತನ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಹೇಳಿದರು.