ಯು.ಎಸ್.ಜತೆ ಚೀನಾ ಮಾತುಕತೆ ರದ್ದು

ನ್ಯೂಯಾರ್ಕ್, ಆ.೬- ಅಮೆರಿಕಾ ಸ್ಪೀಕರ್ ನ್ಯಾನ್ಸಿ ಪೊಲೋಸಿಯ ತೈವಾನ್ ಭೇಟಿಯ ಬಳಿಕ ಕ್ರೋದಗೊಂಡಿರುವ ಚೀನಾ, ಇದೀಗ ಯುಎಸ್ ಜೊತೆ ಮುಂದೆ ನಡೆಯಬೇಕಿದ್ದ ಹಲವು ದ್ವಿಪಕ್ಷೀಯ ಮಾತುಕತೆಗಳನ್ನು ರದ್ದುಗೊಳಿಸಿದೆ. ಇದರಲ್ಲಿ ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿದ ಸಭೆಯೂ ಸೇರಿದೆ ಎನ್ನಲಾಗಿದೆ.
ವಿಶ್ವದ ಎರಡು ಅತೀ ದೊಡ್ಡ ಆರ್ಥಿಕತೆ ಹಾಗೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲ ಹೊರಸೂಸುವ ರಾಷ್ಟ್ರಗಳಾದ ಅಮೆರಿಕಾ ಹಾಗೂ ಚೀನಾ ಮುಂದೆ ತಮ್ಮ ದ್ವಿಪಕ್ಷೀಯ ಮಾತುಕತೆಗಳನ್ನು ರದ್ದುಪಡಿಸಿರುವುದು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಲಿದೆ ಎನ್ನಲಾಗಿದೆ. ಮುಂದೆ ಜಾಗತಿಕ ಹವಾಮಾನ ಶೃಂಗಸಭೆ ಸಿಒಪಿ೨೭ ನಡೆಯಲು ಇನ್ನೂ ನೂರಕ್ಕೂ ಕಡಿಮೆ ದಿನ ಬಾಕಿ ಉಳಿದಿದೆ. ಆದರೆ ತೈವಾನ್‌ಗೆ ಅಮೆರಿಕಾ ಸ್ಪೀಕರ್ ಭೇಟಿಯ ವಿಚಾರವನ್ನು ಮುಂದಿಟ್ಟುಕೊಂಡು ಇದೀಗ ಚೀನಾ ಮಾತುಕತೆಯಿಂದ ಹಿಂದೆಸರಿದಿದೆ. ಅತೀ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಹೊರಸೂಸುವ ರಾಷ್ಟ್ರಗಳಲ್ಲಿ ಚೀನಾ ಇದ್ದು, ಆದರೆ ಇದೀಗ ಅದೇ ಶೃಂಗಸಭೆಯಿಂದ ಹೊರಗುಳಿದಿರುವುದು ಇದಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿನ್ನಡೆ ತಂದಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ಹವಾಮಾನ ಬದಲಾವಣೆಗೆ ಸಂಬಂಧಿಸಿದ ರಾಜತಾಂತ್ರಿಕ ಅಧಿಕಾರಿ ಜಾನ್ ಕೆರ್ರಿ, ದ್ವಿಪಕ್ಷೀಯ ಭಿನ್ನಾಭಿಪ್ರಾಯಗಳ ಕಾರಣದಿಂದ ಯಾವುದೇ ದೇಶವು ಅಸ್ತಿತ್ವವಾದದ ಬಹುರಾಷ್ಟ್ರೀಯ ವಿಷಯಗಳ ಪ್ರಗತಿಯನ್ನು ತಡೆಹಿಡಿಯಬಾರದು. ಚೀನಾದ ಈ ನಡೆಯಿಂದ ಅಮೆರಿಕಾವನ್ನು ಶಿಕ್ಷಿಸಿದಂತೆ ಆಗುವುದಿಲ್ಲ. ಬದಲಾಗಿ ಇದು ಜಗತ್ತು, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಶಿಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.