ಯುಸಿಸಿ ನಾಳೆ ಮಹತ್ವದ ಸಭೆ

ಮುಂಗಾರು ಅಧಿವೇಶನದಲ್ಲೇ ಮಸೂದೆ ಮಂಡನೆಗೆ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ತೀರ್ಮಾನ ನಿರೀಕ್ಷೆ


ನವದೆಹಲಿ, ಜು. ೨- ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸನ್ನದ್ಧವಾಗಿರುವ ಆಡಳಿತರೂಢ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಪ್ರಕ್ರಿಯೆಗಳನ್ನು ಬಿರುಸುಗೊಳಿಸಿದೆ. ಈ ಸಂಬಂಧ ಕಾನೂನು ಮತ್ತು ನ್ಯಾಯ ಸಚಿವಾಲಯದ ನೇತೃತ್ವದಲ್ಲಿ ರಚಿಸಲಾಗಿರುವ ಮಹತ್ವದ ಸಂಸದೀಯ ಸ್ಥಾಯಿ ಸಮಿತಿ ಸಭೆ ನಾಳೆ ದೆಹಲಿಯಲ್ಲಿ ನಡೆಯಲಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ.
ಜುಲೈ ೨೦ ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಈ ಅಧಿವೇಶನದಲ್ಲೇ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸಲು ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಅಭಿಪ್ರಾಯ ಸಂಗ್ರಹಿಸಲು ರಚಿಸಲಾಗಿರುವ ಸಂಸದೀಯ ಸ್ಥಾಯಿ ಸಮಿತಿ ಸಭೆ ನಾಳೆ ನಡೆಯುತ್ತಿದ್ದು ಮಸೂದೆಗೆ ಅಂತಿಮ ಮುದ್ರೆ ಬೀಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಪ್ರಸ್ತುತ ರಚನೆಯಾಗಿರುವ ೨೨ ಕಾನೂನು ಆಯೋಗ ಏಕರೂಪ ನಾಗರಿಕ ಸಂಹಿತೆ ಕುರಿತಂತೆ ವೈಯಕ್ತಿಕ ಕಾನೂನು ತನ್ನ ವರದಿಯನ್ನು ಇನ್ನು ಸಲ್ಲಿಸಿಲ್ಲ. ಈ ಸಮಿತಿಯಲ್ಲಿ ಕಾನೂನು ವ್ಯವಹಾರ ಇಲಾಖೆ, ಕಾನೂನು ಆಯೋಗದ ಸದಸ್ಯರನ್ನು ಆಹ್ವಾನಿಸಿ ಯುಸಿಸಿ ಕುರಿತಂತೆ ವೈಯಕ್ತಿಕ ಕಾನೂನುಗಳ ಪರಾಮರ್ಶೆ ನಡೆಸಲಿದೆ.
ಈ ಮಧ್ಯೆ ನವದೆಹಲಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಸಂಸದೀಯ ವ್ಯೂಹಾತ್ಮಕ ಗುಂಪಿನ ಸಭೆ ಸಂಸದೀಯ ಪಕ್ಷದ ನಾಯಕಿ ಸೋನಿಯಾಗಾಂಧಿ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಕೆ.ಸಿ. ವೇಣುಗೋಪಾಲ್, ಜೈರಾಂ ರಮೇಶ್, ಪಿ. ಚಿದಂಬರಂ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.
ಯುಸಿಸಿ ಕುರಿತಂತೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ನಾಳೆ ನಡೆಯಲಿರುವ ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗುವ ಯುಸಿಸಿ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
೨೦೧೮ರಲ್ಲಿ ಯುಸಿಸಿ ಕುರಿತು ಕಾನೂನು ಆಯೋಗ ನೀಡಿರುವ ವರದಿಯ ಬಗ್ಗೆಯೂ ಕಾಂಗ್ರೆಸ್ ಚರ್ಚಿಸಲು ಮುಂದಾಗಿದೆ. ಮುಂಬರುವ ಮುಂಗಾರು ಸಂಸತ್ ಅಧಿವೇಶನದಲ್ಲೂ ಕಾಂಗ್ರೆಸ್ ಯುಸಿಸಿ ವಿಷಯ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬೀಳಲು ತೀರ್ಮಾನ ಕೈಗೊಳ್ಳಲಾಗಿದೆ.
ಇವೆಲ್ಲದರ ಜೊತೆಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರು ಆಗಿರುವ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷಗಳೊಂದಿಗೆ ಸರಣಿ ಸಭೆ ನಡೆಸಿ ಸಂಸತ್ ಅಧಿವೇಶನಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಂತ್ರ ರೂಪಿಸಿದ್ದಾರೆ.
ಇತ್ತೀಚೆಗೆ ಮಧ್ಯೆ ಪ್ರದೇಶದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಮತ್ತೇ ಅಧಿಕಾರಕ್ಕೆ ಬರಲು ಬಿಜೆಪಿ ಯುಸಿಸಿ ಮಂಡಿಸಲು ಮುಂದಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ. ಮತ್ತೊಂದೆಡೆ ಯುಸಿಸಿಗೆ ಎನ್‌ಡಿಎ ಮಿತ್ರಪಕ್ಷಗಳಲ್ಲೇ ವಿರೋಧ ವ್ಯಕ್ತವಾಗಿವೆ.