ಯುವ ಸಮುದಾಯದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ

ಮಂಗಳೂರು, ನ.೧- ತುಳು ಸಂಸ್ಕೃತಿ, ಆಚರಣೆಗಳು ಮತ್ತು ಸಾಹಿತ್ಯ ಪರಂಪರೆಯನ್ನು ಯುವ ಸಮುದಾಯ ಮುಂದುವರಿಸಿಕೊಂಡು ಹೋಗಬೇಕು. ಪ್ರತಿಯೊಬ್ಬರೂ ಭಾಷಾಭಿಮಾನವನ್ನು ಮೆರೆಯುವುದರೊಂದಿಗೆ ತುಳು ಭಾಷಾ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಾಹಿತಿ ಮುದ್ದು ಮೂಡುಬೆಳ್ಳೆ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್, ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ, ಕರಾವಳಿ ಕುರುಬರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ತುಳು ಅಕಾಡೆಮಿ ಚಾವಡಿಯಲ್ಲಿ ನಡೆದ ‘ ತುಳು ಸಬಿ ಸವಾಲ್ -೨೦೨೦’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ತುಳುನಾಡಿನ ವೈಭವ, ತುಳು ಸಂಸ್ಕೃತಿಯನ್ನು ತಿಳಿದುಕೊಳ್ಳಲು ಆಸಕ್ತಿವಹಿಸುವಂತೆ ಯುವಜನಾಂಗವನ್ನು ಆಕರ್ಷಿಸುವ ನೆಲೆಯಲ್ಲಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ತುಳು ಸಬಿಸವಾಲ್ ಕಾರ್ಯಕ್ರಮ ಇದಕ್ಕೆ ಪೂರಕವಾಗಿದೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ವೈಷಮ್ಯದ ಸವಾಲಿನ ನಡುವೆ ತುಳು ಸಬಿಸವಾಲು ಉತ್ತಮ ಪರಿಕಲ್ಪನೆ. ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಹೆಚ್ಚಿನ ತಿಳುವಳಿಕೆ ಬೆಳೆಸಿಕೊಳ್ಳಲು ಇದು ಪೂರಕವಾಗಿದೆ ಎಂದರು.
ತುಳುನಾಡಿನ ಆಚರಣೆಗಳು, ಪಾಡ್ದನಗಳು, ಸಂಸ್ಕೃತಿ ಇವೆಲ್ಲವನ್ನು ಕೂಡ ಜನತೆಗೆ ಮುಟ್ಟಿಸುವ ನೆಲೆಯಲ್ಲಿ ಅಕಾಡೆಮಿ ನಿರತವಾಗಿದೆ. ಯೂಟ್ಯೂಬ್ ಚಾನೆಲ್ ಆರಂಭಿಸಿ ಆ ಮೂಲಕವೂ ಜನಮಾನನಸಕ್ಕೆ ತಲುಪಿಸುವ ಕಾರ್ಯವಾಗಲಿದೆ ಎಂದವರು ಹೇಳಿದರು.
‘ಹೊಸ ದಿಗಂತ’ ಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಎನ್.ಟಿ. ಬಾಳೇಪುಣಿ ಮಾತನಾಡಿ, ತುಳು ಸಾಹಿತ್ಯ ಪರಂಪರೆಗೆ ಹಿರಿಯರು ಕೊಟ್ಟ ಕೊಡುಗೆಯನ್ನು ಮರೆಯಬಾರದು. ಅವರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಇದೇ ಸಂದರ್ಭ ತುಳು ಸಬಿಸವಾಲ್ ಸಂಯೋಜಕರಾದ ಮೋಹನದಾಸ್ ಮರಕಡ ಮತ್ತು ಬಬಿತಾ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.
ವಕೀಲೆ ಆಶಾಲತಾ ಕಾಮತ್, ಕರಾವಳಿ ಕುರುಬರ ಸಂಘದ ಮಂಗಳೂರು ಇದರ ಅಧ್ಯಕ್ಷ ಮಂಜುನಾಥ ನೋಟಗಾರ್, ರಿಷಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಅವಿನಾಶ್ ಕುಲಾಲ್, ಪರಿಸರಪ್ರೇಮಿ ಮಾಧವ ಉಳ್ಳಾಲ್ ಉಪಸ್ಥಿತರಿದ್ದರು.
ಪೂರ್ವಾಹ್ನ ತುಳು ಸಬಿ ಸವಾಲ್ ಕಾರ್ಯಕ್ರಮವನ್ನು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‌ಸಾರ್ ಉದ್ಘಾಟಿಸಿದರು. ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ವಿಶ್ವನಾಥ ಪದ್ಮುಂಜ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಾಯಿನಾಥ್ ಶೆಟ್ಟಿ,ಲಯನ್ಸ್ ಕ್ಲಬ್
ಮಂಗಳೂರು ಕಂಕನಾಡಿ ಪಡೀಲ್ ಅದರ ಅಧ್ಯಕ್ಷೆ ಅರುಂಧತಿ ಶೆಟ್ಟಿ, ವಲಯ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ, ತುಳು ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು, ಚೇತಕ್ ಪೂಜಾರಿ, ಪತ್ರಕರ್ತ ಶರತ್ ಶೆಟ್ಟಿ
ಕಿನ್ನಿಗೋಳಿ, ರಿಷಿ ಪ್ರತಿಷ್ಠಾನದ ದಿವಾಕರ ಪದ್ಮುಂಜ, ಸಂಘಟಕರಾದ ನವೀನ್ ಗಾಂಧಿನಗರ, ಪ್ರಶಾಂತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ದೇವಿಕಾ ಸುಳ್ಯ
ಸ್ವಾಗತಿಸಿ, ಮೋಹನದಾಸ್ ಮರಕಡ ವಂದಿಸಿದರು. ಶಿಕ್ಷಕಿ ರಾಜಶ್ರೀ
ಜೆ.ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.