ಯುವ ಸಬಲೀಕರಣ,ವಿವೇಕಾನಂದ ಜಯಂತಿ ಆಚರಣೆ

ಕೋಲಾರ,ಜ.೧೩:ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕೋಲಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ ಮತ್ತು ನೆಹರು ಯುವ ಕೇಂದ್ರ ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರದಲ್ಲಿ ಯುವ ಸಬಲೀಕರಣ ದಿನ ಮತ್ತು ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು.
ಸಮಾರಂಭದ ಉದ್ಘಾಟನೆ ಮಾಡಿದ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್.ಎಂ.ನಾಗರಾಜ್ ರವರು ಮಾತನಾಡಿ ಸಮಾಜದಲ್ಲಿರುವ ಜಾತಿ, ಧರ್ಮ, ಲಿಂಗ ತಾರತಮ್ಯ ಇತ್ಯಾದಿ ಸಮಸ್ಯೆಗಳನ್ನು ಹೋಗಲಾಡಿಸಿ ಯುವಕರು ರಾಷ್ಟ್ರೀಯ ನಿರ್ಮಾಣದಲ್ಲಿ ಪಾಲ್ಗೊಳ್ಳಲು ವಿವೇಕಾ ನಂದರು ಸ್ಫೂರ್ತಿಯಾಗಿದ್ದು, ಯುವಕರು ಕೇವಲ ಸರ್ಕಾರಿ ಉದ್ಯೋಗವನ್ನು ಅವಲಂಭಿಸದೆ ಸ್ವಂತ ಉದ್ಯೋಗ ಮತ್ತು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಾಗೂ ತಪ್ಪದೆ ಮತ ಚಲಾಯಿಸಿ ಸದೃಢ ಭಾರತ ನಿರ್ಮಾಣಕ್ಕೆ ಸಹಕರಿಸಿ ಎಂದು ತಿಳಿಸಿದರು.
ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್. ಗಂಗಾಧರ್ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಜನರು ಸಾರ್ಥಕ ಜೀವನ ನಡೆಸಲು, ಸಮಾಜ ಉತ್ತಮ ಸ್ಥಿತಿಗೆ ತಲುಪಲು ಯುವಕರ ಪಾತ್ರ ಅತಿಮುಖ್ಯವಾಗಿದ್ದು, ಯುವಜನಾಂಗಕ್ಕೆ ವಿವೇಕನಂದರ ಸಂದೇಶಗಳು, ಅವರ ಮೌಲ್ಯಗಳು ದಾರಿ ದೀಪವಾಗಿವೆ. ಯುವ ಜನತೆ ವಿವೇಕನಂದ ಸಂದೇಶಗಳನ್ನು ಪಾಲಿಸುವ ಮೂಲಕ ದೇಶದ ಕಾನೂನುಗಳನ್ನು ಪಾಲಿಸಿ, ಸಂವಿಧಾನದ ಮೂಲಕ ನೀಡಿರುವ ಕಾನೂನುಗಳನ್ನು ಪಾಲಿಸಬೇಕು, ಆಗ ಸುಸ್ಥಿರ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಸಿ.ಕೆ.ಶಿವಣ್ಣ ಮಾತನಾಡಿ, ವಿವೇಕನಂದರು ಆಧ್ಯಾತ್ಮಿಕತೆಯ ಮೂಲಕ ದೇಶವ್ಯಾಪಿ ಸಂಚರಿಸಿ ಜನರಲ್ಲಿ ಜ್ಞಾನ ತುಂಬಿದರು. ಆದರೂ ಮಾನವ ಪ್ರಾಣಿ ಪಕ್ಷಿಗಳನ್ನು ಸಂಹಾರ ಮಾಡಿ ರಾಕ್ಷಸ ಜೀವನ ನಡೆಸುತ್ತಿದ್ದಾರೆ. ವಿವೇಕಾನಂದರು ವೈಚಾರಿಕತೆ ಮತ್ತು ಆಧ್ಯಾತ್ಮಿಕತೆಯನ್ನು ವಿಶ್ವದಲ್ಲೇ ಮೇರು ಮಟ್ಟಕ್ಕೆ ಏರಿಸಿದ iಹಾನ್ ಚೇತನ. ಅವರ ಆದರ್ಶಗಳನ್ನು ನಾವೆಲ್ಲಾ ಪಾಲಿಸಬೇಕೆಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವೇಕಾನಂದ ಯುವ ಸಬಲೀಕರಣ ಕೇಂದ್ರದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಶಂಕರಪ್ಪ ರವರು ಪ್ರಾಸ್ಥಾವಿಕ ನುಡಿಯಲ್ಲಿ ಮಾನ್ಯ ವಿವೇಕಾನಂದರು ಯುವ ಜನತೆಗೆ ಉತ್ತಮನಾಗು ಮತ್ತು ಉಪಯೋಗವಾಗು ಎಂದು ಸಂದೇಶ ನೀಡಿದ್ದಾರೆ. ಈಗಿನ ಜನತೆ ಈ ಸಂದೇಶವನ್ನು ಅರ್ಥ ಮಾಡಿಕೊಂಡು ಅವರವರ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಉಪಯೋಗವಾಗಬೇಕಿದೆ. ವಿವೇಕಾನಂದರು ಶಿಕ್ಷಣದ ಬಗ್ಗೆ ಸಂದೇಶವನ್ನು ನೀಡಿ ಮನುಷ್ಯನಲ್ಲಿ ಮಾನವೀಯತೆ ಮೌಲ್ಯಗಳನ್ನು ಹೆಚ್ಚಿಸುವುದೇ ಶಿಕ್ಷಣ ಮತ್ತು ಯಾರ ಹೃದಯ ದೀನದಲಿತರ ಅಭಿವೃದ್ಧಿಗಾಗಿ ಮಿಡಿಯುತ್ತದೆಯೋ ಅವರೇ iಹಾತ್ಮರು ಎಂಬ ಅಭಿಪ್ರಾಯವನ್ನು ತಿಳಿಸಿ, ಇದರ ಜೊತೆಗೆ ಯುವ ಜನತೆ ಕೇವಲ ಸರ್ಕಾರಿ ಉದ್ಯೋಗಗಳನ್ನು ಬಯಸದೆ ವ್ಯವಸಾಯವನ್ನು ಉದ್ಯೋಗವನ್ನಾಗಿ ಮಾಡಿಕೊಂಡು ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು. ಸತ್ಯಕ್ಕಾಗಿ ಯಾವುದನ್ನಾದರೂ ಬೇಕಾದರೂ ತ್ಯಾಗ ಮಾಡಿ, ಯಾವುದಕ್ಕೂ ಸತ್ಯವನ್ನು ತ್ಯಾಗ ಮಾಡಬೇಡಿ ಎಂದು ಜನತೆಗೆ ಮಾರ್ಗದರ್ಶನ ನೀಡಿದರು. ಎಂದು ಡಾ|| ಆರ್. ಶಂಕರಪ್ಪ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಎ ವಿದ್ಯಾಭ್ಯಾಸ ಪೂರೈಸಿ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಮಹೇಂದ್ರ ಮತ್ತು ವೆಂಕಟೇಶ್ ಹಾಗೂ ಇತಿಹಾಸ ವಿಭಾಗದ ಮಾರ್ಕೊಂಡಯ್ಯ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಮಧುಲತ ಮೋಸಸ್ ಅಧ್ಯಕ್ಷೀಯ ನುಡಿಗಳ ಮೂಲಕ ವಿವೇಕನಂದರ ಸಂದೇಶಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಯುವಸಬಲೀಕರನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕೆ.ಎನ್. ಮಂಜುನಾಥ್, ಜಿಲ್ಲಾ ಸಮನ್ವಯಾಧಿಕಾರಿ ಸರಣ್ಯ, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮುರಳೀಧರ್, ಪ್ರೊ. ಶ್ರೀನಿವಾಸ ಗೌಡ, ಪ್ರೊ. ಮಹೇಶ್, ಪ್ರೊ. ರಾಮಕೃಷ್ಣಯ್ಯ, ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಸಂಯೋಜಕರಾದ ಶ್ರೀನಿವಾಸ ಮೂರ್ತಿ, ಪ್ರೊ. ನರೇಂದ್ರ, ಪ್ರೊ. ಕೆ.ಶ್ರೀನಿವಾಸ್ ಮುಂತಾದವರು ಹಾಜರಿದ್ದರು.