ಯುವ ಶಕ್ತಿಯೇ ದೇಶದ ಶಕ್ತಿ: ರಾಷ್ಟ್ರೀಯ ಯುವಜನೋತ್ಸವದಲ್ಲಿ ಪ್ರಧಾನಿ ಮೋದಿ ಸಂದೇಶ

ಹುಬ್ಬಳ್ಳಿ, ಜ.12: ಡಿಜಿಟಲ್ ಇಂಡಿಯಾದ ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಭರಿತ ಯುವಜನತೆಗೆ ಅವಕಾಶಗಳ ಬಾಗಿಲು ತೆರೆದಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”- ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ದೇಶವನ್ನು ಕೊಂಡೊಯ್ಯಲು ಯುವಸಮುದಾಯ ಕೈಜೋಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುವ ಸಮುದಾಯಕ್ಕೆ ಕರೆ ನೀಡಿದರು.

“ವಿಕಸಿತ ಯುವ-ವಿಕಸಿತ ಭಾರತ” ಎಂಬ ಘೋಷವಾಕ್ಯದೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಮೂರುಸಾವಿರ ಮಠ…ಸಿದ್ಧಾರೂಢ ಮಠ ಇಂತಹ ಅನೇಕ ಮಠಗಳ ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು..
ಚೆನ್ನಮ್ಮನ ನಾಡು, ರಾಯಣ್ಙನ ಬೀಡು ಪುಣ್ಯದ ನಾಡಿಗೆ ನನ್ನ ನಮಸ್ಕಾರಗಳು…. ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ, ದೇಶದ ಪ್ರಗತಿಯಲ್ಲಿ ಯುವಕರ ಪಾತ್ರವನ್ನು ಮನದಟ್ಟು ಮಾಡಿಕೊಟ್ಟರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಅನೇಕ ಸಂಗೀತ ಲೋಕದ ದಿಗ್ಗಜರನ್ನು ಸ್ಮರಿಸಿದರು.

“ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”- ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಕನ್ನಡದಲ್ಲಿ ಉಚ್ಛರಿಸಿ, ಇಂತಹ ಸಂದರ್ಭದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಅರಿತುಕೊಂಡ ದೇಶವನ್ನು ಮುನ್ನಡೆಸಬೇಕಿದೆ ಎಂದರು.

ಸ್ವಾಮಿ ವಿವೇಕಾನಂದರು ಕರ್ನಾಟಕದ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಬೆಂಗಳೂರು, ಹುಬ್ಬಳ್ಳಿ-ಧಾರವಾಡದಲ್ಲಿ ಸಂಚರಿಸಿದ್ದರು. ಮೈಸೂರು ಮಹಾರಾಜರು ವಿವೇಕಾನಂದ ಅವರು ಶಿಕ್ಯಾಗೊ ಸಮ್ಮೇಳನ ಹೋಗಲು ನೆರವು ನೀಡಿದ್ದರು ಎಂದು ನೆನಪಿಸಿಕೊಂಡರು.

ಏಕ ಭಾರತ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶವು ಹೊಸ ಸಂಕಲ್ಪದಿಂದ ಮುನ್ನಡೆದಿದೆ. ಯುವ ಶಕ್ತಿ ಸದೃಢವಾಗಿದ್ದರೆ ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು. ಚೆನ್ನಮ್ಮ ಎಂತಹ ಸಂಕಷ್ಟದ ಕಾಲದಲ್ಲೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಂಗೊಳ್ಳಿ ರಾಯಣ್ಣನ ಶೌರ್ಯವು ಬ್ರಿಟಿಷ್ ರ ಎದೆ ನಡುಗಿಸಿತ್ತು. ಇಂತಹ ಮಹನೀಯರ ದೇಶಭಕ್ತಿ ನಮಗೆ ಆದರ್ಶವಾಗಬೇಕಿದೆ ಎಂದರು.

ಸರ್. ಎಂ. ವಿಶ್ವೇಶ್ವರಯ್ಯ ಅವರು ತಮ್ಮ ಪ್ರತಿಭೆಯ ಮೂಲಕ ಯುವ ಸಮುದಾಯವು ಹೇಗೆ ಎಲ್ಲೆಡೆ ಪಸರಿಸಿದೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಗಣಿತದಿಂದ ವಿಜ್ಞಾನದ ಯಾವುದೇ ಸ್ಪರ್ಧೆ ನಡೆದರೂ ಭಾರತೀಯರ ಸಾಧನೆ ಅದ್ವಿತೀಯ. ಇದು ಭಾರತದ ಯುವಶಕ್ತಿಯ ಸಂಕೇತವಾಗಿದೆ. ಯುವಶಕ್ತಿ ದೇಶವನ್ನು ನಡೆಸುವ ಶಕ್ತಿಯಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಯುವಶಕ್ತಿ ದಿಕ್ಸೂಚಿಯಾಗಲಿದೆ. ನಮ್ಮ ಚಿಂತನೆ ಹಾಗೂ ಪ್ರಯತ್ನಗಳು ಸಕಾರಾತ್ಮಕವಾಗಿ ಇರಬೇಕು. ಜಗತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದ ಕಡೆ ನೋಡುತ್ತಿದೆ. ಇದರ ಹಿಂದೆ ಯುವಶಕ್ತಿಯ ಶ್ರಮವಿದೆ ಎಂದರು.

ಭಾರತವು ಜಗತ್ತಿನ 5 ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇದನ್ನು ಮೂರನೇ ಸ್ಥಾನಕ್ಕೆ ತರುವ ಗುರಿ ನಮ್ಮದಾಗಿದೆ. ಕೃಷಿ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಯುವ ಜನತೆಗೆ ಇನ್ನಷ್ಟು ಅವಕಾಶಗಳು ಲಭಿಸಲಿವೆ. ಕ್ರೀಡಾ ಕ್ಷೇತ್ರದಲ್ಲಿ ಭಾರತವು ಪ್ರಕಾಶಿಸುತ್ತಿರುವುದಕ್ಕೆ ಯುವ ಸಮುದಾಯದ ಪ್ರಯತ್ನವೇ ಕಾರಣವಾಗಿದೆ. ಇದೊಂದು ವಿಶೇಷ ಅವಕಾಶ. ಈಗಿರುವುದು ವಿಶೇಷ ಪೀಳಿಗೆ ಆಗಿದೆ. ದೇಶದ ಆರ್ಥಿಕತೆ ಸುಧಾರಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ.
ಇದೀಗ ರನ್ ವೇ ಸಿದ್ಧವಾಗಿದೆ. ಯುವ ಸಮಯದಾಯ ಇದನ್ನು ಬಳಸಿಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ಹಾರಲು ಮುಂದಾಗಬೇಕಿದೆ ಎಂದರು.

ಸ್ತ್ರೀಶಕ್ತಿಯು ರಾಷ್ಟ್ರಶಕ್ತಿಯನ್ನು ಮುನ್ನಡೆಸುವಲ್ಲಿ ಸಫಲರಾಗಿದ್ದಾರೆ. ಫೈಟರ್ ಜೆಟ್ ಹಾರಿಸುತ್ತಿರುವ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ. ಯುವಜನತೆ ವರ್ತಮಾನದಲ್ಲಿದ್ದುಕೊಂಡು ಭವಿಷ್ಯದ ಕಡೆ ಸಕಾರಾತ್ಮಕವಾಗಿ ಯೋಚಿಸುವ ಮೂಲಕ ಹೊಸ ಹೊಸ ಆವಿಷ್ಕಾರಗಳತ್ತ ಚಿತ್ತವನ್ನು ಹರಿಸಬೇಕು. ಸೈಬರ್ ಸೆಕ್ಯುರಿಟಿ, ಡೇಟಾ‌ ಸೈನ್ಸ್, ದೇಶದ ಸುರಕ್ಷತೆ ಸೇರಿ ಎಲ್ಲದರ ಸ್ವರೂಪ ಬದಲಾಗಿದೆ. ಯುವಸಮುದಾಯವು ತಂತ್ರಜ್ಞಾನದ ಈ ಬದಲಾವಣೆಯಿಂದ ಪಾಠ ಕಲಿತು ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಯುವಶಕ್ತಿಯ ಮುಂದೆ ಹತ್ತಾರು ಅವಕಾಶಗಳಿವೆ. ಆಯ್ಕೆ ಅವರ ಮುಂದಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಯುವಕರು ವೈಯಕ್ತಿಕ ಸಾಧನೆಯ ಜತೆಗೆ ಸಾಂಸ್ಥಿಕ ಹಾಗೂ ಅನ್ವೇಷಣೆ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಯುವಶಕ್ತಿಯನ್ನು ಕಟ್ಟಿಕೊಂಡು ದೇಶದಲ್ಲಿ ವಿಭಿನ್ನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ದೇಶದ ಬೇರೆ‌ ಬೇರೆ ಭೌಗೋಳಿಕ ಪ್ರದೇಶಗಳ ಯುವಕರ ತಂಡಗಳು ಬಂದಿವೆ. ಇಲ್ಲಿನ ಸ್ಪರ್ಧೆಯಲ್ಲಿ ಯಾರೇ ಗೆದ್ದರೂ ಅಂತಿಮವಾಗಿ ಭಾರತವೇ ಗೆಲ್ಲುತ್ತದೆ.
ಆದ್ದರಿಂದ ಯುವಜನೋತ್ಸವದಲ್ಲಿ ಭಾಗವಹಿಸುವ ತಂಡಗಳು ವಿಕಸಿತ ಭಾರತ ಸಮರ್ಥ ಭಾರತವನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರುಗಳಾದ ಅನುರಾಗ್ ಸಿಂಗ್ ಠಾಕೂರ್, ಪ್ರಹ್ಲಾದ್ ಜೋಶಿ, ನಿಸಿತ್ ಪ್ರಮಾಣಿಕ್, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ,
ಡಾ.ಕೆ.ಸಿ. ನಾರಾಯಣಗೌಡ,
ಆಚಾರ್ ಹಾಲಪ್ಪ, ಸಿ.ಸಿ.ಪಾಟೀಲ, ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ವಿ.ಪ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್, ತವನಪ್ಪ ಅಷ್ಟಗಿ,
ರಾಜು ಕೋಟೆಣ್ಣವರ, ಮಹಾಪೌರ ಈರೇಶ್ ಅಂಚಟಗೇರಿ ಮತ್ತಿತರರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಯಿತು.

ಚಿತ್ತಾಕರ್ಷಕ ಪಥಸಂಚಲನ:

ದೇಶದ ವೈವಿಧ್ಯಮಯ ಕಲೆ, ಪೋಷಾಕು, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ತಾಕರ್ಷಕ ಪಥಸಂಚಲನ ವಿವಿಧ ರಾಜ್ಯಗಳಿಂದ ಆಗಮಿಸಿದ ಯುವಕರ ತಂಡಗಳಿಂದ ಜರುಗಿತು. ರಾಷ್ಟ್ರೀಯ ಯೋಗಾಸನ ಮತ್ತು ಕ್ರೀಡಾ ಫೆಡರೇಷನ್ನಿನ ವಿದ್ಯಾರ್ಥಿಗಳಿಂದ ಕಲಾತ್ಮಕ ಯೋಗಾಸನ ಮತ್ತು ಮಲ್ಲಕಂಬ ಸಾಹಸಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಜರುಗಿತು.