ಯುವ ಮತದಾರರ ನೊಂದಣಿಗೆ ಆದ್ಯತೆ ನೀಡಲು ಸೂಚನೆ

ಚಿತ್ರದುರ್ಗ ನ. 13:  ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಈಗಾಗಲೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭವಾಗಿದ್ದು, ಈ ಸಂಬಂಧ ಮಿಂಚಿನ ನೊಂದಣಿ ಅಭಿಯಾನದಡಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.  ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ಆಕಸ್ಮಿಕ ಭೇಟಿ ನೀಡಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‍ಒ) ಕಾರ್ಯವೈಖರಿಯನ್ನು ಪರಿಶೀಲಿಸಿದರು, ಅಲ್ಲದೆ ಎಲ್ಲ ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಆದ್ಯತೆ ನೀಡುವಂತೆ ಅವರು ಸೂಚನೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಗೊಂಡಿದ್ದು, 18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.  ಅಲ್ಲದೆ ಈಗಾಗಲೆ ಪಟ್ಟಿಯಲ್ಲಿರುವವರ ಹೆಸರು ಮತ್ತಿತರ ತಿದ್ದುಪಡಿ, ಸ್ಥಳಾಂತರ, ಫೋಟೋ ಬದಲಾವಣೆ ಹೀಗೆ ವಿವಿಧ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲು ಸಾರ್ವಜನಿಕರು ಹಾಗೂ ಮತದಾರರಿಗೆ ಡಿ. 08 ರವರೆಗೂ ಕಾಲಾವಕಾಶ ನೀಡಲಾಗಿದೆ.  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನ. 12, ನ. 20, ಡಿ. 03 ಹಾಗೂ ಡಿ. 04 ರಂದು ಮಿಂಚಿನ ನೊಂದಣಿ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಶನಿವಾರದಂದು ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ, ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳು ಶನಿವಾರ ತಾಲ್ಲೂಕಿನ ಮಲ್ಲನಕಟ್ಟೆಯ ಸರ್ಕಾರಿ ಹಿ.ಪ್ರಾ. ಶಾಲೆ, ನಗರದ ವಿ.ಪಿ. ಬಡಾವಣೆಯ ಸ.ಹಿ.ಪ್ರಾ.ಶಾಲೆ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು, ಅಲ್ಲದೆ ಖುದ್ದಾಗಿ ಬಿಎಲ್‍ಒ ಅವರೊಂದಿಗೆ ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿ, ಸಾರ್ವಜನಿಕರೊಂದಿಗೆ ಅಗತ್ಯ ಮಾಹಿತಿ ಪಡೆದುಕೊಂಡರು.  ಈಗಾಗಲೆ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ಅಥವಾ ಏನಾದರೂ ತಪ್ಪಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.  ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಜನಸಂಖ್ಯೆ ಆಧಾರದಲ್ಲಿ ಅಂದಾಜು ಶೆ. 70 ರಷ್ಟು ಜನರು 18 ವರ್ಷಕ್ಕೂ ಮೇಲ್ಪಟ್ಟವರು ಇರುತ್ತಾರೆ, ಇವರೆಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು, ಪ್ರತಿ ಗ್ರಾಮ ವಾರ್ಡ್‍ಗಳಲ್ಲಿ ಈ ಆಧಾರದ ಮೇಲೆ ಮತಪಟ್ಟಿ ಪರಿಷ್ಕರಣೆ ನಡೆಯುತ್ತದೆ.  ಇದರಿಂದ ಚುನಾವಣೆ ಸಮದಲ್ಲಿ ಯಾವುದೇ ಗೊಂದಲಗಳೂ ಉಂಟಾಗುವುದಿಲ್ಲ, ಅಲ್ಲದೆ ಅಕ್ರಮ ಮತದಾನವನ್ನು ತಡೆಗಟ್ಟಬಹುದಾಗಿದೆ.  ಒಟ್ಟಾರೆ ಯಾವೊಬ್ಬ ಅರ್ಹರೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು, ಅಲ್ಲದೆ ಮಹಿಳೆ ಮತ್ತು ಪುರುಷ ಮತದಾರರ ಅನುಪಾತ, ಸಮರ್ಪಕವಾಗಿಸುವ ನಿಟ್ಟಿನಲ್ಲಿ, ಎಲ್ಲ ಅರ್ಹ ಮಹಿಳಾ ಮತದಾರರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಿಎಲ್‍ಒ ಗಳು ಮುಂದಾಗಬೇಕು, ಆಸಕ್ತಿ ವಹಿಸಿ, ಮನೆ ಮನೆ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಅಗತ್ಯ ಮಾಹಿತಿಯನ್ನು ಪಡೆದುಕೊಂಡು, ಇದುವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳದವರನ್ನು ಗುರುತಿಸಿ, ಅಂತಹ ಅರ್ಹರನ್ನು ಸೇರ್ಪಡೆ ಮಾಡಲು ಆದ್ಯತೆ ನೀಡಬೇಕು, ನಿಧನ ಹೊಂದಿದವರು, ಗ್ರಾಮ ಬಿಟ್ಟು ಹೋದವರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಕೆಲಸ ಆಗಬೇಕು,  17 ವರ್ಷ ವಯಸ್ಸು ಆದವರ ಅರ್ಜಿಯನ್ನೂ ಕೂಡ ಪಡೆಯಬಹುದಾಗಿದ್ದು, ಅಂತಹವರ ಅರ್ಜಿಯನ್ನು ಪಡೆದು, ಅವರಿಗೆ 18 ವರ್ಷ ಪೂರ್ಣಗೊಂಡ ಬಳಿಕ ಅಂತಹವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು, ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿ, ಅಕ್ಕಪಕ್ಕದ ಮನೆಗಳ ಯುವ ಮತದಾರರ ನೊಂದಣಿಗೆ ಕರೆ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಬೇಕು, ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.