
ಬೀದರ. ಮೇ. 5: ಯುವ ಮತದಾರರು ಸೇರಿದಂತೆ ಎಲ್ಲರೂ ಮೇ. 10 ರಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾ ಸ್ವೀಫ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ. ಹೇಳಿದರು.
ಅವರು ಬುಧವಾರ ಸಂಜೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಬೀದರ ವತಿಯಿಂದ ಬೀದರ ನಗರದ ಪಾಪನಾಶ ಕೆರೆಯ ಬಳಿ ಹಮ್ಮಿಕೊಂಡಿದ್ದ ಕ್ಯಾಂಡಲ್ ಮಾರ್ಚ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂವಿಧಾನದಲ್ಲಿ ಸಾರ್ವತ್ರಿಕ ಚುನಾವಣಾ ಪದ್ದತಿ ಅಳವಡಿಸಲಾಗಿದೆ. ಇದು ನಮ್ಮೆಲ್ಲರಿಗೂ ಮತದಾನ ಮಾಡುವ ಈ ಸೌಭಾಗ್ಯ ಕಲ್ಪಿಸಿದೆ. ಆದರಿಂದ ಯಾರು ಮತದಾನದಿಂದ ದೂರ ಉಳಿಯದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದರು.
ಬೀದರ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಯುವಂತೆ ಮಾಡಲು ಜಿಲ್ಲಾಡಳಿತ ಬೀದರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲಾ ಸ್ವೀಫ್ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಮತದಾನ ಮಾಡಲು ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮೇ. 10 ರಂದು ನಡೆಯುವ ಮತದಾನ ದಿನದಂದು ತಮ್ಮ- ತಮ್ಮ ಮತಗಳನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಮತ್ತು ಮತದಾನ ಮಾಡುವದು ನಮ್ಮ ಹಕ್ಕಾಗಿದೆ ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರು. ರಾಜ್ಯ ಮಟ್ಟದ ಚುನಾವಣಾ ಮಾಸ್ಟರ್ ತರಬೇತಿದಾರ ಗೌತಮ ಅರಳಿ. ಬೀದರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಬೀದರ ನಗರದ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.