
ಚಿತ್ರದುರ್ಗ.ಏ.೨೮; ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಯುವ ಮತದಾರರು ಶೇ.100ರಷ್ಟು ಮತದಾನ ಮಾಡಬೇಕು ಎಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಹನುಮಂತಪ್ಪ ಹೇಳಿದರು.ಇಲ್ಲಿನ ರಾಘವೇಂದ್ರ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ಸಹಯೋಗದೊಂದಿಗೆ ಗುರುವಾರ ಯುವ ಮತದಾರರ ಜಾಗೃತಿ ಕಾರ್ಯಕ್ರಮ-ನೂತನವಾಗಿ ನೋಂದಾಯಿಸಿದ ಯುವ ಮತದಾರರಿಗೆ ಮತದಾನದಲ್ಲಿ ಭಾಗವಹಿಸಲು ಆಮಂತ್ರಣ ಪತ್ರ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೇ 10ರಂದು ನಡೆಯುವ ಚುನಾವಣೆಯಲ್ಲಿ ಭವ್ಯ ಭಾರತದ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸೋಣ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸೋಣ. ದೇಶವನ್ನು ಅಭಿವೃದ್ಧಿಯತ್ತ ಸಾಗಿಸೋಣ ಎಂದರು.ನನ್ನ ಮತ ನನ್ನ ಹಕ್ಕು” ಎಂಬ ಧ್ಯೇಯದೊಂದಿಗೆ ತಮ್ಮ ವ್ಯಾಪ್ತಿಯ ಮತಗಟ್ಟೆಗೆ ಎಲ್ಲರೊಂದಿಗೆ ಆಗಮಿಸಿ, ಮತ ಚಲಾಯಿಸಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಸದೃಢ ಹಾಗೂ ಮಾದರಿ ನಾಡಿನ ನಿರ್ಮಾಣಕ್ಕೆ ಸಹಕರಿಸಿ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಂ.ಎಸ್.ದಿವಾಕರ ಅವರ ಮಾರ್ಗದರ್ಶನದಂತೆ ಯುವ ಮತದಾರರಿಗೆ ಅಮಂತ್ರಣ ಪತ್ರಿಕೆ ನೀಡುವ ಮುಖಾಂತರ ಕಡ್ಡಾಯವಾಗಿ ಮತದಾನ ಮಾಡುವಂತೆ ಅಭಿನಂದನಾ ಪತ್ರ ನೀಡಲಾಗುತ್ತಿದೆ ಎಂದರು.ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸುಷ್ಮಾ ರಾಣಿ ಯುವ ಮತದಾರರಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ನೂರಾರು ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಸಹಾಯಕ ಚುನಾವಣಾ ಸಿಬ್ಬಂದಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಅರೋಗ್ಯ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಸದಸ್ಯ ಡಾ.ಬಿ.ವಿ.ಗಿರೀಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಬಿಇಒ ಗಿರಿಜಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗನಾಥ ರೆಡ್ಡಿ, ಶ್ರೀಧರ್, ಗಂಗಾಧರೆಡ್ಡಿ, ಪ್ರಸನ್ನ ಕುಮಾರ್, ತಾಲ್ಲೂಕು ಪಂಚಾಯತಿ ವಿಷಯ ನಿರ್ವಾಹಕ ಮಂಜುನಾಥ್, ರಾಘವೇಂದ್ರ ಕಾಲೇಜಿನ ಪ್ಯಾರಾ ಮೆಡಿಕಲ್ ವಿಭಾಗದ ಪ್ರಾಂಶುಪಾಲೆ ರಮ್ಯಾ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.