ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರೇ ಅಂತಿಮ ಸ್ಪೂರ್ತಿ-ಪಿ. ಕೃಷ್ಣಕಾಂತ

ಧಾರವಾಡ ಜ.14-ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿಯ ಅಂಗವಾಗಿ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಅವರು ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಲು ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳೇ ಅಂತಿಮ ಸ್ಪೂರ್ತಿ ಹಾಗೂ ಮಾರ್ಗದರ್ಶನ ಮಾಡುವಂತಹವುಗಳಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಧಾರವಾಡ ಶಹರ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾದ ಜಿ. ಅನುಷಾ ಅವರು ಮಾತನಾಡಿ ಇಂದಿನ ಯುವಕರು ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಲು ಸಮಾಜದಲ್ಲಿರುವ ದುಶ್ಚಟ ಹಾಗೂ ದುವ್ರ್ಯಸನಗಳಿಂದ ದೂರವಿದ್ದು ವಿವೇಕಾನಂದರ ಆದರ್ಶಗಳನ್ನು ಹಾಗೂ ಯೋಗ ಮತ್ತು ಧ್ಯಾನಾದಿ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಆಶ್ರಮದ ಅಧ್ಯಕ್ಷರಾದ ಪರಮ ಸ್ವಾಮಿ ವಿಜಯಾನಂದ ಸರಸ್ವತಿಯವರು ಸಾನಿಧ್ಯವಹಿಸಿ ದೇಶದ ಎಲ್ಲ ಕ್ಷೇತ್ರಗಳ ಬಹಳಷ್ಟು ಉನ್ನತ ಸಾಧಕರುಗಳೆಲ್ಲ ಸ್ವಾಮಿ ವಿವೇಕಾನಂದರಿಂದಲೇ ಸ್ಪೂರ್ತಿ ಪಡೆದವರಾಗಿದ್ದಾರೆ. ಇಂದಿನ ದಿನ ಅಂತಹ ಸ್ಪೂರ್ತಿಯನ್ನು ಪಡೆದು ಜೀವನದಲ್ಲಿ ಯಶಸ್ಸು ಪಡೆಯಲು ಎಲ್ಲ ಯುವ ಜನಾಂಗಕ್ಕೆ ಪ್ರೇರಕವಾಗಿದೆ ಎಂದು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕ್ಲಾಸಿಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮಣ ಎಸ್ ಉಪ್ಪಾರ ಉಪಸ್ಥಿತರಿದ್ದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಹಾಗೂ ಯೋಗ ಸಂಪನ್ಮೂಲ ವ್ಯಕ್ತಿ ಕಾಶೀನಾಥ ಹಂದ್ರಾಳ ಅವರು ಕಾರ್ಯಕ್ರಮವನ್ನು ನಿರೂಪಿಸಿ ದೇಶಭಕ್ತಿ ಗೀತೆ ಹಾಗೂ ವಿವೇಕಾನಂದರ ಜಾಗೃತಿಯ ಹಾಡುಗಳನ್ನು ಹಾಡಿಸಿದರು. ಗುರುದೇವ ಅವರು ಸ್ವಾಗತಿಸಿದರು.
ನಗರದ ವಿವಿಧ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.