ಯುವ ಜನರ ಸಬಲೀಕರಣ ಅಭಿವೃದ್ದಿ ಪೂರಕ ಕಾರ್ಯ ಚಟುವಟಿಕೆಗಳ ಆಯೋಜನೆಗೆ ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ, ನ.14- ಯುವ ಜನರ ಅಭಿವೃದ್ದಿ ಮತ್ತು ಸಬಲೀಕರಣಕ್ಕಾಗಿ ವ್ಯಕ್ತಿತ್ವ, ಪ್ರತಿಭೆ, ಸಕಾರಾತ್ಮಕ ಜೀವನ ಶೈಲಿ, ಕೌಶಲ್ಯ ತರಬೇತಿ ಸೇರಿದಂತೆ ಇನ್ನಿತರ ಎಲ್ಲಾ ಪ್ರಗತಿಗೆ ಪೂರಕವಾದ ಕಾರ್ಯ ಚಟುವಟಿಕೆಗಳನ್ನು ನೆಹರು ಯುವ ಕೇಂದ್ರ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಶಕ್ತಿಯನ್ನು ಸಮಾಜಮುಖಿ ಹಾಗೂ ರಾಷ್ಟ್ರೀಯ ಯೋಜನೆಗಳ ಅನುಷ್ಠಾನಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಯುವ ಜನರಿಗೆ ಜಾಗೃತಿ, ಶಿಕ್ಷಣ, ಸಾಮಥ್ರ್ಯ ವರ್ಧನೆ, ನಾಯಕತ್ವ, ವ್ಯಕ್ತತ್ವ ವಿಕಸನ ಮತ್ತು ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ರಾಷ್ಟ್ರ ನಿರ್ಮಾಣದ ಪ್ರಗತಿಗೆ ಕೊಡುಗೆ ನೀಡಲು ಉತ್ತೇಜಿಸಬೇಕಿದೆ. ಇಂತಹ ಮಹತ್ತರ ಕಾರ್ಯಕ್ರಮಗಳಿಗೆ ಜಿಲ್ಲೆಯ ಯುವ ಜನರನ್ನು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಯುವ ಜನರ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕಿದೆ. ಯುವ ಜನರನ್ನು ಅಗತ್ಯಗಳು, ಅವಶ್ಯಕತೆಗಳ ಬಗ್ಗೆ ಗಮನಹರಿಸಬೇಕು. ಗ್ರಾಮೀಣ ಭಾಗದ ಯುವ ಕ್ಲಬ್‍ಗಳು ರಚನಾತ್ಮಕವಾಗಿ ತೊಡಗಿಕೊಳ್ಳಲು ನೆರವಾಗಬೇಕು. ಈ ನಿಟ್ಟಿನಲ್ಲಿ ನೊಂದಣಿ ಕಾರ್ಯ ಸಮರ್ಪಕವಾಗಿ ಆಗಬೇಕು. ಉತ್ಸಾಹಿ ಮತ್ತು ಸಮಾಜ ಸೇವಾ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರನ್ನು ಗುರುತಿಸಿ ಅವಕಾಶ ಮಾಡಿಕೊಡಬೇಕು ಎಂದರು.
ಸರ್ಕಾರದ ಅನೇಕ ಜನಪರ ಯೋಜನೆಗಳು ಯಶಸ್ವಿಯಾಗಿ ತಲುಪಲು ಯುವ ಜನರನ್ನು ಬಳಸಿಕೊಳ್ಳಬಹುದಾಗಿದೆ. ಸರ್ಕಾರದಿಂದ ದೊರೆಯುವ ಆರ್ಥಿಕ ಸೌಲಭ್ಯ, ಅದರಿಂದ ಆಗುವ ಲಾಭಗಳು ಪಡೆಯುವ ವಿಧಾನದ ಬಗ್ಗೆ ಮಾಹಿತಿ ನೀಡಬೇಕಿದೆ. ಫಲಾನುಭವಿಗಳಿಗೆ ಯುವ ಜನತೆ ನೆರವಾಗಲು ಸೂಕ್ತ ತರಬೇತಿ ಆಯೋಜಿಸಬೇಕಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಜನರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ಯುವ ಜನರನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳಬಹುದಾಗಿದೆ. ಯುವ ಸ್ವಯಂ ಸೇವಕರು ಜನರಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆಯ ಮಹತ್ವ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೇಜರ್ ಬಳಕೆ ಸೇರಿದಂತೆ ತಿಳಿವಳಿಕೆ ನೀಡುವುದಕ್ಕಾಗಿ ತೊಡಗಿಸಿಕೊಳ್ಳಲು ಅವಕಾಶವಿದೆ ಎಂದರು.
ಪ್ರಾಕೃತಿಕ ವಿಪತ್ತು ಸಂದರ್ಭಗಳಲ್ಲಿ ನೆರವಾಗಲು ಯುವ ಜನರಿಗೆ ಸೂಕ್ತ ತರಬೇತಿ ನೀಡಿ ಸಜ್ಜುಗೊಳಿಸುವುದು ಸಹ ಉಪಯುಕ್ತವಾಗಲಿದೆ. ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಹೇಗೆ ಕಾರ್ಯಾಚರಣೆ ನಡೆಸಬೇಕು? ಉದ್ಬವಿಸಬಹುದಾದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಪೂರ್ವ ಸಿದ್ದತಾ ತರಬೇತಿ ಕೊಟ್ಟು ಯುವ ಜನರನ್ನು ಸನ್ನದ್ದಗೊಳಿಸುವ ಕಾರ್ಯವೂ ಸಹ ನೆಹರು ಯುವ ಕೇಂದ್ರ ಆಯೋಜನೆ ಮಾಡುವುದು ಒಳಿತು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಯುವ ಜನರಿಗೆ ಹೆಚ್ಚು ಜಾಗೃತಿ ಮಾಡಿಸುವಂತಹ ಕಾರ್ಯ ನಡೆಸಬೇಕು. ನೆಹರು ಕೇಂದ್ರದ ಜೊತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರೆಡ್‍ಕ್ರಾಸ್, ಎನ್.ಎಸ್.ಎಸ್ ಸಂಸ್ಥೆಗಳ ಸಹಯೋಗದೊಂದಿಗೆ ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಪಂಚಾತಿಯ ಯೋಜನಾಧಿಕಾರಿ ವಿ. ದೀಪಾ, ನೆಹರು ಯುವ ಕೇಂದ್ರದ ಯುವಜನ ಸಮನ್ವಯಾಧಿಕಾರಿ ಕೆ. ರಾಜೇಶ್ ಕಾರಂತ್, ಲೆಕ್ಕಾಧಿಕಾರಿ ಸತೀಶ್, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ, ಜಿಲ್ಲಾ ಕೌಶ್ಯಭಿವೃದ್ಧಿಕಾರಿ ಕೆ.ಸಿ. ರವಿಶಂಕರ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಮಹೇಶ್, ಡಾ. ಗಿರೀಶ್, ಎನ್.ಎಸ್.ಎಸ್. ಅಧಿಕಾರಿ ಎಂ.ಬಿ. ಮಹೇಶ್, ನೆಹರು ಯುವ ಕೇಂದ್ರದ ಪ್ರಮೋದ್ ಹಾಗೂ ದ್ರಾಕ್ಷಾಯಿಣಿ ಸಭೆಯಲ್ಲಿ ಹಾಜರಿದ್ದರು.