ಯುವ ಜನರು ತಂಬಾಕು ಸೇವನೆ ತ್ಯಜಿಸಿ

ಚಾಮರಾಜನಗರ, ಜೂ.02- ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕು ಸೇವನೆ ಚಟವನ್ನು ವಿದ್ಯಾರ್ಥಿಗಳು ಯುವಜನರು ತ್ಯಜಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ ಅವರು ಸಲಹೆ ಮಾಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ನೆಹರು ಯುವ ಕೇಂದ್ರ, ಶ್ರೀ ವರಮಹಾಲಕ್ಷ್ಮೀ ಸಾಂಸ್ಕøತಿಕ ಕ್ರೀಡಾ ಸೇವಾ ಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕಿನಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿ ಸಾವು ನೋವುಗಳು ಹೆಚ್ಚಾಗುತ್ತವೆ. ತಂಬಾಕು ಕ್ಯಾನ್ಸರ್ ಹಾಗೂ ಇತರೆ ಖಾಯಿಲೆಗಳಿಗೆ ಕಾರಣವಾಗಬಹುದು. ತಂಬಾಕಿನಿಂದ ಉತ್ತಮ ಜೀವನಶೈಲಿಯು ಬದಲಾಗುವ ಸಾಧ್ಯತೆಗಳು ಉಂಟು. ಈ ರೀತಿ ಚಟಗಳಿಂದ ಯುವಜನರು ದೂರವಿರುವುದು ಸೂಕ್ತ ಎಂದರು.
ಸಾಮಾನ್ಯವಾಗಿ ವಿದ್ಯಾರ್ಥಿಗಳು, ಯುವಜನತೆ ಯಾವುದೇ ಅರಿವಿಲ್ಲದೆ ತಂಬಾಕು ಸೇವನೆಗೆ ಬಲಿಯಾಗುತ್ತಿದ್ದಾರೆ. ಪೋಷಕರು ಹಾಗೂ ತಮ್ಮ ಸುತ್ತಲಿನ ಜನರಿಗೆ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಅವರಿಗೆ ಸರಿ ದಾರಿಗೆ ತರುವಲ್ಲಿ ಪ್ರಯತ್ನಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ ಅವರು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವೀರಣ್ಣ ಅವರು ಮಾತನಾಡಿ ತಂಬಾಕಿನಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಅನಾರೋಗಕ್ಕೆ ಗುರಿಯಾಗಬೇಕಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ತಂಬಾಕು ಸೇವನೆಯಿಂದ ಸಾವು ಸಂಭವಿಸುವ ಸಾಧ್ಯತೆ ಉಂಟಾಗುತ್ತದೆ. ಸತತವಾಗಿ 8 ರಿಂದ 10 ವರ್ಷದವರೆಗೆ ತಂಬಾಕು ಸೇವನೆಯಿಂದ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಚಂದ್ರಮ್ಮ ಅವರು ಮಾತನಾಡಿ ಸಿಗರೇಟ್ ನಂತಹ ಚಟಗಳಲ್ಲಿ ಕೆಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಸಿನಿಮಾ, ಮತಿತ್ತರ ಮನರಂಜನೆ ಕಾರ್ಯಕ್ರಮಗಳಿಗೆ ಯುವ ಜನತೆ ಮಾರಿಹೋಗಿ ಅದನ್ನೇ ಅನುಸರಿಸತೊಡಗಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಚಟಗಳಿಗೆ ಬಲಿಯಾಗದೇ ಭವಿಷ್ಯದಲ್ಲಿ ಮುಂದೆ ಬರಬೇಕು. ಉತ್ತಮ ಪ್ರಜೆಯಾಗಿ ರೂಪಿತವಾಗಬೇಕು ಎಂದರು.
ನಂತರ ವಿದ್ಯಾರ್ಥಿಗಳಿಗೆ ಚಾರ್ಜರ್ ಬಲ್ಬ್‍ಗಳನ್ನು ವಿತರಣೆ ಮಾಡಲಾಯಿತು.
ಶ್ರೀ ವರಮಹಾಲಕ್ಷ್ಮೀ ಸಾಂಸ್ಕøತಿಕ ಕ್ರೀಡಾ ಸೇವಾ ಸಂಸ್ಥೆಯ ಅಧ್ಯಕ್ಷ ಜಿ. ಬಂಗಾರು, ಅಗ್ನಿ ಶಾಮಕ ಅಧಿಕಾರಿ ಶಿವಾಜಿರಾವ್ ಪವಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್, ನಗರಸಭೆ ಆರೋಗ್ಯ ನಿರೀಕ್ಷಕ ಮಂಜು, ನೆಹರು ಯುವ ಕೇಂದ್ರದ ಸಹನಾ, ಯುವ ಸ್ಪಂದನಾಧಿಕಾರಿ ಮಾದಲಾಂಬಿಕೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.