ಯುವ ಜನತೆ ವಿವೇಕಾನಂದರ ಆದರ್ಶ ಮೈಗೂಡಿಸಿಕೊಳ್ಳಬೇಕು

ಸಿರವಾರ,ಜ.೧೮- ಭಾರತೀಯ ಧಾರ್ಮಿಕ ಪರಂಪರೆಯ ಸಾಕ್ಷಿ ಪ್ರತಿಜ್ಞೆಯಂತಿದ್ದ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ ಎಂದು ನಿವೃತ್ತ ಯೋಧ ವಿಜಯೇಂದ್ರ ಹೇಳಿದರು.
ಪಟ್ಟಣದ ಅಮರೇಗೌಡ ಪಾಟೀಲ್ ಬಯ್ಯಾಪೂರು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿ, ವೀರಸನ್ಯಾಸಿ ವಿವೇಕಾನಂದ ಕಡಲಿನಾಚೆಯ ದೇಶಗಳಿಗೆ ತೆರಳಿ ಸನಾತನ ಧಾರ್ಮಿಕ ಭಾರತೀಯತೆಯನ್ನು ಪರಿಚಯಿಸಿದರು.
ಹದಿ- ಹರೆಯದ ಯುವಕ-ಯುವತಿಯರಿಗೆ ಹೃದಯಮಂದಿರದಲ್ಲಿ ಶೌರ್ಯಧೈರ್ಯದ ಪರಿಕಲ್ಪನೆಯನ್ನು ತುಂಬಲು ದೇಶದಾದ್ಯಂತ ಸಂಚರಿಸಿದರು. ಆಧ್ಯಾತ್ಮಿಕ ಸಂತ ಶ್ರೀರಾಮಕೃಷ್ಣ ಪರಮಹಂಸರು ಮತ್ತು ಶಾರದಾ ಮಾತೆಯರ ಪದತಲದಲ್ಲಿ ದಕ್ಷಿಣೇಶ್ವರದಲ್ಲಿ ಬೆಳೆದರು. ಯುವಜನತೆಗೆ ವಿವೇಕಾನಂದರ ಜೀವನದ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಪಿ. ಪ್ರವೀಣ್ ಕುಮಾರ ವಹಿಸಿ ಮಾತನಾಡಿ, ಇಂದಿನ ಯುವಕರು ಸ್ವಾಮಿ ವಿವೇಕಾನಂದರವರ ಆದರ್ಶಗಳು ರಾಷ್ಟ್ರ ಅಭಿಮಾನ ಬೆಳೆಸಿಕೊಂಡು ಯುವ ಸಮುದಾಯ ದುಶ್ಚಟಗಳಿಗೆ ದುರ್ವರ್ತನೆಗಳಿಗೆ ಒಳಗಾಗದೆ ಉನ್ನತ ಗುರಿಗಳನ್ನು ಇಟ್ಟುಕೊಂಡು, ಆ ಗುರಿಗಳ ಈಡೇರಿಕೆಗಾಗಿ ಉತ್ತಮ ಅಭ್ಯಾಸವನ್ನು ಮಾಡಿ ದೇಶ ಸೇವೆಗೆ ಪಾತ್ರರಾಗಬೇಕು ಎಂದು ಹೇಳಿದರು. ವೇದಿಕೆ ಮೇಲೆ ಉಪನ್ಯಾಸರಾದ ಫಕ್ರುದ್ದೀನ್ ಮುರಡಿ, ಶಿವಕುಮಾರ, ತಿಪ್ಪಣ್ಣ, ಹುಸೇನ್ ನಾಯಕ, ಯುವ ಸಬಲೀಕರಣ ಕ್ರೀಡಾ ಇಲಾಖೆ ರಾಯಚೂರಿನ ಸಿಬ್ಬಂದಿಯವರಾದ ಮುತ್ತಣ್ಣರವರು ಉಪಸ್ಥಿತರಿದ್ದರು.