ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಫಯಾಜ್ ಸ್ಪರ್ಧೆ

ತುಮಕೂರು, ಜ. ೧೦- ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತುಮಕೂರಿನ ಯುವ ಮುಖಂಡ ಜೈನ್ ಶೇಖ್ ಫಯಾಜ್ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದಾರೆ.
ಆನ್‌ಲೈನ್ ಮೂಲಕ ನಡೆಯುತ್ತಿರುವ ಯುವ ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತವನ್ನು ಚಲಾವಣೆ ಮಾಡಬಹುದಾಗಿದೆ. ಚಿಟ್ಟೆ ಗುರುತು-ಸಂಖ್ಯೆ೯೮ಕ್ಕೆ ಮತ ಹಾಕುವ ಮೂಲಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ದೇಶದ ಭವಿಷ್ಯವಾಗಿರುವ ಯುವ ಶಕ್ತಿಯನ್ನು ಶಕ್ತವಾಗಿ ಮುನ್ನಡೆಸುವುದಕ್ಕಾಗಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಮುಂದಾಲೋಚನೆಯಿಂದ ಸ್ಥಾಪಿತಗೊಂಡಿರುವ ಯುವ ಕಾಂಗ್ರೆಸ್‌ನಲ್ಲಿ ಕಳೆದ ೧೩ ವರ್ಷಗಳಿಂದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದು, ಕಳೆದ ಮೂರು ವರ್ಷಗಳಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಸೇವೆಯನ್ನು ಮಾಡಿದ್ದು, ಈ ಬಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವುದಾಗಿ ತಿಳಿಸಿದರು.
ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಯುವ ಕಾಂಗ್ರೆಸ್‌ಗೆ ಸದಸ್ಯರ ಸೇರ್ಪಡೆ ಹಾಗೂ ಯುವ ಕಾಂಗ್ರೆಸ್ ಸದಸ್ಯರ ಸಮಾವೇಶದಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ, ಉದ್ಯೋಗ ಮೇಳ, ಆರೋಗ್ಯ ಮೇಳ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಯುವಕರನ್ನು ಸಂಘಟಿಸುವುದರೊಂದಿಗೆ ಹಲವು ಯುವ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ಯುವ ಕಾಂಗ್ರೆಸ್ ಸದಸ್ಯರಿಗೆ ಸ್ಥಳೀಯ ಸಂಸ್ಥೆ, ಪಾಲಿಕೆ, ನಗರಸಭೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ವಿಧಾನ ಸಭೆ ಚುನಾವಣೆಯಲ್ಲಿ ಶೇ.೫ ರಷ್ಟು ಮೀಸಲಾತಿ ದೊರಕಿಸಲು ಹೋರಾಡುವುದಾಗಿ ತಿಳಿಸಿದ್ದಾರೆ.