ಯುವ ಕಾಂಗ್ರೆಸ್ ಚುನಾವಣೆ : ರಾಯಚೂರು – ಸಿಂಧನೂರು ಬಣ ಹಣಾಹಣಿ

 • ಸಿಂಧನೂರು ಅಧಿಪತ್ಯಕ್ಕೆ ಹಂಪನಗೌಡ-ಬಸವನಗೌಡ : ರಾಯಚೂರಿನಲ್ಲಿ ಬೋಸರಾಜು-ಯಾಸೀನ್
  ರಾಯಚೂರು.ಜ.೧೨- ಕಾಂಗ್ರೆಸ್ ಪಕ್ಷದ ಯುವ ಘಟಕದ ಚುನಾವಣೆ ರಾಯಚೂರು ಮತ್ತು ಸಿಂಧನೂರು ತಾಲೂಕುಗಳಲ್ಲಿ ಜಿದ್ದಾಜಿದ್ದಿ ಪೈಪೋಟಿಯ ರಣಾಂಗವಾಗಿ ಮುಂಬರುವ ವಿಧಾನಸಭಾ ಚುನಾವಣೆಯ ರಾಜಕೀಯ ಸಿದ್ಧತೆಯ ವೇದಿಕೆಯಾಗಿ ಪರಿವರ್ತನೆಗೊಂಡಿದೆ.
  ಕೋವಿಡ್ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಚುನಾವಣೆ ನಿರ್ವಹಿಸುವ ಮೂಲಕ ರಾಜ್ಯ, ಜಿಲ್ಲಾ ಮತ್ತು ನಗರ ಘಟಕಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಇಂದು ಜಿಲ್ಲೆಯಲ್ಲಿ ಮತದಾನ ನಡೆದಿದೆ. ಹಾಲಿ ಅಧ್ಯಕ್ಷ ಅರುಣ್ ದೋತರಬಂಡಿ ಎರಡನೇ ಅವಧಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೇ, ಹುಸೇನ್ ಬಾಷಾ, ಮರಿಸ್ವಾಮಿ ಮತ್ತು ಶಫೀಯುಲ್ಲಾ ಖಾನ್ ಅವರು ಪ್ರತಿ ಸ್ಪರ್ಧಿಗಳಾಗಿದ್ದಾರೆ. ಸಿಂಧನೂರು ಮತ್ತು ರಾಯಚೂರಿನಲ್ಲಿ ಪೈಪೋಟಿ ಗಂಭೀರವಾಗಿದೆ.
  ಸಿಂಧನೂರಿನಲ್ಲಿ ಹಂಪನಗೌಡ ಬಾದರ್ಲಿ ಅವರ ಬಣದಿಂದ ಸೈಫುಲ್ಲಾ ಖಾನ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೇ, ರಾಜ್ಯ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಬಸವನಗೌಡ ಬಾದರ್ಲಿ ಅರುಣ್ ದೋತರಬಂಡಿ ಅವರಿಗೆ ಬೆಂಬಲಿಸಿದ್ದಾರೆ. ನಗರ ಘಟಕಕ್ಕೆ ಹಂಪನಗೌಡ ಬಣದಿಂದ ಮೌಲಾಲಿ ಕಣದಲ್ಲಿದ್ದರೇ, ಬಸವನಗೌಡ ಅವರ ಬಣದಿಂದ ಅಬೀಬ್ ಖಾಜೀ ಅವರು ಕಣದಲ್ಲಿದ್ದಾರೆ. ನಗರ ವಿಧಾನಸಭಾ ಕ್ಷೇತ್ರದಲ್ಲಿ ಬೋಸರಾಜು ಮತ್ತು ರವಿ ಬೋಸಾಜು ಅವರ ಬಣ, ಅರುಣ್ ದೋತರಬಂಡಿ ಅವರ ಮರು ಆಯ್ಕೆಗೆ ಪ್ರಯತ್ನಿಸುತ್ತಿದ್ದರೇ, ಮತ್ತೊಂದೆಡೆ ಯಾಸೀನ್ ಮತ್ತು ಅವರ ಬೆಂಬಲಿಗರು ವಿರೋಧಿಗಳಾಗಿದ್ದಾರೆ.
  ನಗರ ಘಟಕಕ್ಕೆ ಯಾಸೀನ್ ಅವರು ವೀಣಾ ಕಣಕ್ಕಿಳಿಸಿದರೇ, ಬೋಸರಾಜು ಅವರ ಬಣ ಮೀರ್ ಅಖ್ಮಲ್ ಕಣದಲ್ಲಿದ್ದಾರೆ. ಸೈಯದ್ ಯಾಸೀನ್ ಅವರು ಬಹುತೇಕವಾಗಿ ನಗರ ವಿಧಾನಸಭಾ ಕ್ಷೇತ್ರದಿಂದ ದೂರವಿರುವ ಮೂಲಕ ಕೇವಲ ಆನ್ ಲೈನ್ ಹೇಳಿಕೆ ಹಾಗೂ ಆನ್ ಲೈನ್ ಸಂಘಟನೆ ಹೊಸ ತಂತ್ರಜ್ಞಾನ ಹುಡುಕಿಕೊಂಡಿದ್ದರೇ, ಬೋಸರಾಜು ಮತ್ತು ರವಿ ಬೋಸರಾಜು ಅವರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಮುಂಬರುವ ಚುನಾವಣೆಯ ಸಿದ್ಧತೆ ತೀವ್ರಗೊಳಿಸಿದ್ದಾರೆ.
  ಯುವ ಕಾಂಗ್ರೆಸ್ಸಿನ ಈ ಚುನಾವಣೆ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಮತ್ತೇ ತಮ್ಮ ಹಿಡಿತ ಸಾಧಿಸಲು ಈಗಾಗಲೇ ಅತಿ ಹೆಚ್ಚಿನ ಸಂಖ್ಯೆಯ ಸದಸ್ಯತ್ವ ನೋಂದಾಯಿಸಿದ್ದಾರೆ. ಅಲ್ಪಸಂಖ್ಯಾತರನ್ನೇ ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ, ಮುಂದಿನ ವಿಧಾನಸಭಾ ಚುನಾವಣಾ ರಾಜಕೀಯ ಪೂರ್ವ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತಮ್ಮ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ಶತಾಯ, ಗತಾಯ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅರುಣ್ ದೋತರಬಂಡಿ ಮತ್ತು ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ತಮ್ಮದೇ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಗರ ವಿಧಾವಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮಧ್ಯೆಯೂ ತಮ್ಮ ಹಿಡಿತ ಸಾಧಿಸುವ ಪ್ರಯೋಗಕ್ಕೆ ಮುಂದಾಗಿದ್ದಾರೆ.
  ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರಾಬಲ್ಯದ ಮೂಲಕ ಭಂಡಾಯದ ಎಲ್ಲಾ ಗೊಂದಲ ನಿವಾರಿಸಿ, ಕಟ್ಟ ಕಡೆಗೆ, ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನ ಗೆಲ್ಲುವ ಮೂಲಕ ಬಿಜೆಪಿಗೆ ಭಾರೀ ಮುಖಭಂಗಕ್ಕೆಡೆಯಾಗುವಂತೆ ಮಾಡುವುದರೊಂದಿಗೆ ಕಾಂಗ್ರೆಸ್ಸಿನ ತಮ್ಮ ವಿರೋಧಿ ಬಣವಾದ ಯಾಸೀನ್ ಮತ್ತು ಇತರೆ ನಾಯಕರು ತುಟಿ ಬಿಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಗ್ರಾಮ ಪಂಚಾಯತ ಚುನಾವಣೆಯಲ್ಲಿಯೂ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಈಗ ಯುವ ಕಾಂಗ್ರೆಸ್ ಚುನಾವಣೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಭಾರೀ ಪ್ರಯತ್ನ ನಡೆಸಿದ್ದಾರೆ.
  ಸಿಂಧನೂರು ಮತ್ತು ರಾಯಚೂರು ಹೊರತು ಪಡಿಸಿದರೇ, ಉಳಿದ ಎಲ್ಲಾ ಕಡೆ ತಮ್ಮದೇ ಪ್ರಾಬಲ್ಯ ಹೊಂದಿದ ಈ ಬಣ ಈ ಎರಡು ತಾಲೂಕುಗಳಲ್ಲಿ ಯಾಸೀನ್, ಹಂಪನಗೌಡ ಅವರ ವಿರುದ್ಧ ತಮ್ಮ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬಸವನಗೌಡ ಬಾದರ್ಲಿ ಅವರ ಮೂಲಕ ಸಿಂಧನೂರಿನಲ್ಲಿ ವಿರೋಧಿಗಳನ್ನು ಹಣಿಯಲು ಮುಂದಾಗಿದ್ದಾರೆ. ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಬೋಸರಾಜು ಅವರ ಬಣಕ್ಕೆ ಪರ್ಯಾಯ ಶಕ್ತಿಯೇ ಇಲ್ಲ ಎನ್ನುವ ಮಟ್ಟಕ್ಕೆ ತಮ್ಮನ್ನು ತಾವು ಜನರ ಮಧ್ಯೆ ಪರಿಚಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
  ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ನಗರದಲ್ಲಿ ಬೋಸರಾಜು ಮತ್ತು ರವಿ ಬೋಸರಾಜು ಬಣ ಪರ್ಯಾಯ ರಾಜಕೀಯ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಈ ಕ್ಷೇತ್ರದಲ್ಲಿ ಟಿಕೆಟ್ ಕೇಳುವ ಏಕೈಕ ನಾಯಕರಾಗಿದ್ದ ಸೈಯದ್ ಯಾಸೀನ್, ಕಳೆದ ಅನೇಕ ದಿನಗಳಿಂದ ಕ್ಷೇತ್ರದಲ್ಲಿ ಕಾಣದಿರುವುದು ಮತ್ತು ಚುನಾವಣಾ ಮತ್ತಿತರ ಸಂಘಟನೆ ಸಂದರ್ಭದಲ್ಲಿ ಇತ್ತ ಬಾರದಿರುವುದು ಬೋಸರಾಜು ಮತ್ತು ಅವರ ಬಣಕ್ಕೆ ಭಾರೀ ಅನುಕೂಲವಾಗಿದೆ.
  ಯುವ ಕಾಂಗ್ರೆಸ್ ಚುನಾವಣೆಯ ಒಟ್ಟು ೮೮೭೨ ಮತಗಳಲ್ಲಿ ಬಹುತೇಕ ಮತಗಳನ್ನು ಬಸವನಗೌಡ, ರವಿ ಬೋಸರಾಜು ಇವರ ತಂಡವೇ ನೋಂದಾಯಿಸಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ೩ ಸಾವಿರ ಮತದಾರರನ್ನು ನೋಂದಾಯಿಸುವ ಮೂಲಕ ಶೇ.೪೦ ರಷ್ಟು ಮತದಾರರನ್ನು ಹೊಂದಿದ ಪ್ರಬಲ ಬಣವಾಗಿ ಗುರುತಿಸಿಕೊಂಡಿದ್ದು, ಜಿಲ್ಲಾ ಯುವ ಕಾಂಗ್ರೆಸ್ ಫಲಿತಾಂಶ ಬೋಸರಾಜು ಮತ್ತು ಅವರ ಬಣದ ಶಕ್ತಿ ಪ್ರದರ್ಶನದ ಅಖಾಡವಾಗಿದ್ದು, ಈ ಫಲಿತಾಂಶ ಇವರ ಬಣದ ಪರವಾಗುವುದೇ ಅಥವಾ ವಿರೋಧವಾಗುವುದೇ ಎನ್ನುವುದು ಕಾದು ನೋಡಬೇಕಾಗಿದೆ.