ಯುವ ಕಾಂಗ್ರೆಸ್‌ನಿಂದ ಕೋವಿಡ್ ಮೆಡಿಕಲ್ ಕಿಟ್ ವಿತರಣೆ

ರಾಯಚೂರು, ಮೇ.೨೧ – ಕೋವಿಡ್ ಸೋಂಕಿನಿಂದ ಮನೆಯಲ್ಲೇ ಪ್ರತ್ಯೇಕವಾಗಿ (ಹೋಂ ಕ್ವಾರಂಟೈನ್) ಚಿಕಿತ್ಸೆ ಪಡೆಯುತ್ತಿರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಮೆಡಿಕಲ್ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಕಾಂಗ್ರೆಸ್ ಮುಖಂಡರು ಎನ್.ಎಸ್.ಬೋಸುರಾಜು ಮಾತನಾಡಿ, ರಾಜ್ಯ ಯುವ ಕಾಂಗ್ರೆಸ್ ರಾಯಚೂರು ನಗರಕ್ಕೆ ಹೋಂ ಕ್ವಾರಂಟೈನ್ ಮೆಡಿಕಲ್ ಕಿಟ್‌ಗಳನ್ನು ನೀಡಿದ್ದು, ಅದರಲ್ಲಿರುವ ಔಷಧಿಗಳನ್ನು ಸಂಬಂಧಿಸಿದ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವಂತೆ ವೈದ್ಯರ ದೂರವಾಣಿ ಸಂಖ್ಯೆಗಳನ್ನು ಸಹ ಕಿಟ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಂಸದ ಬಿ.ವಿ ನಾಯಕ್ ಮಾತನಾಡಿ,
ಕೇವಲ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್ ಜನರಿಗೆ ನೆರವಾಗುವ ದೃಷ್ಟಿಯಿಂದ ಈ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.
ನಂತರ ಮೆಡಿಕಲ್ ಕಿಟ್ ಬಗ್ಗೆ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ ದೋತರಬಂಡಿ ಮಾತನಾಡಿ, ಹೋಮ್ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ ಗಳಿಗೆ ಅಗತ್ಯ ಔಷಧಿಯ ಕಿಟ್‌ಗಳನ್ನು ನೀಡಲು ಯುವ ಕಾಂಗ್ರೆಸ್ ರಾಜ್ಯ ಸಮಿತಿ ನಿರ್ಧರಿಸಿದೆ. ಹೀಗಾಗಿ ರಾಯಚೂರು ಯುವ ಕಾಂಗ್ರೆಸ್ ವತಿಯಿಂದ ವಿವಿಧ ಬ್ಲಾಕ್ ಮಟ್ಟದಲ್ಲಿ ಆಯ್ದ ಮುಖಂಡರು, ಕಾರ್ಯಕರ್ತರ ಮೂಲಕ ರೋಗಿಗಳ ಮನೆ ಬಾಗಿಲಿಗೆ ಮೆಡಿಕಲ್ ಕಿಟ್ ತಲುಪಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರಸ್ಮಾಲ್ ಸುಖನಿ,ಬಸವರಾಜ ರೆಡ್ಡಿ, ಕೆ.ಶಾಂತಪ್ಪ,ಜಯಣ್ಣ ,ಶಿವಮೂರ್ತಿ,ಆಂಜನೇಯ ಕುರುಬದೊಡ್ಡಿ,ಮರಿಸ್ವಾಮಿ ಗಟ್ಟು ಬಿಚ್ಚಾಲಿ,ವೀರಗಂಗಾಧರ, ಹುಸೈನ್ ಬಾಷಾ, ಆದೋನಿ ಮಂಜುಳಾ ಸೇರಿದಂತೆ ಇತರರು ಉಪಸ್ಥಿತರಿದ್ದರು.