ಯುವ ಕಥೆಗಾರರಲ್ಲಿ ಓದು ವಿಸ್ತಾರವಾಗಬೇಕು : ಮಹಾಂತೇಶ ನವಲಕಲ್

ಶಹಾಪೂರ:ಅ.2:ಹೊಸ ತಲೆಮಾರಿನ ಯುವ ಕಥೆಗಾರರ ಓದು ವಿಸ್ತಾರವಾಗಬೇಕು, ಬದುಕು ಸರಳ, ಸಹಜತೆ, ವಿನಯಶೀಲತೆಯಿಂದ ಕೂಡಿರಬೇಕು. ಪ್ರಶಸ್ತಿ ಮತ್ತು ಸನ್ಮಾನಗಳಿಗೆ, ಪ್ರಚಾರಕ್ಕೆ ಮಹತ್ವ ಕೊಡಬಾರದು. ಕಥೆಗಳು ಸಮಾಜದೊಂದಿಗೆ ಮುಖಾಮುಖಿಯಾಗಬೇಕು. ಅನುಸಂಧಾನವಾಗಬೇಕು. ಕಥಾ ಬರಹ ಗಟ್ಟಿಯಾಗಿ ಹೊರಹೊಮ್ಮಬೇಕು ಎಂದು ಖ್ಯಾತ ಕಥೆಗಾರ ಮಹಾಂತೇಶ ನವಲಕಲ್ ಅವರು ಅಭಿಪ್ರಾಯಪಟ್ಟರು.

 ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ವೀರಲೋಕ ಪ್ರಕಾಶನ ಬೆಂಗಳೂರು ಮತ್ತು ನವಚೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ದೇಸಿ ಜಗಲಿ ಕಥಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಥೆಗಾರ ಸಾಮಾಜಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಥನದ ಮೂಲಕ ವಿಶಿಷ್ಟವಾಗಿ ಅನಾವರಣಗೊಳ್ಳಬೇಕು ಎಂದು ಹಲವು ಕನ್ನಡದ ಪ್ರಮುಖ ಕಥೆಗಾರರ ಕಥೆಗಳ ಮೂಲಕ ತಿಳಿಸಿಕೊಟ್ಟರು.
 ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಟಿ.ಡಿ. ರಾಜಣ್ಣ ತಗ್ಗಿ ಅವರು ವಡ್ಡಾರಾಧನೆಯ ವಸ್ತು ವೈವಿಧ್ಯ ಮತ್ತು ಕಥನ ಕೌಶಲ್ಯ ಕುರಿತು ಮಾತನಾಡಿ ಕಥನ ಕಟ್ಟುವಲ್ಲಿ ಸೃಜನಶೀಲ ವ್ಯಕ್ತಿತ್ವದ ಪಾತ್ರ, ವಾಸ್ತವ ಕಲ್ಪನೆ, ಜನಪದ ಕಥೆಗಳ ಸಿದ್ಧ ಮಾದರಿ, ಜೈನ ಧರ್ಮ ಕಥೆಗಳ ಮಾದರಿ ಕುರಿತು ವಿಶಿಷ್ಟವಾಗಿ ತಿಳಿಸಿಕೊಟ್ಟರು.
  ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಪಕರಾದ ಡಾ. ಅಪ್ಪಗೇರೆ ಸೋಮಶೇಖರ ಅವರು ಕನ್ನಡ ಕಥಾ ಪರಂಪರೆ ವಿಭಿನ್ನ ಆಯಾಮಗಳ ಕುರಿತು ಮಾತನಾಡಿ ಕಥಾ ಲೋಕ ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸುತ್ತವೆ. ಕಥೆಗಾರರು ಭಿನ ಆಯಾಮಗಳಿಂದ ಬಂದಿರುವದರಿಂದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ ಎಂದು ಹಲವು ನಿರ್ದರ್ಶನಗಳ ಮೂಲಕ ತಿಳಿಸಿಕೊಟ್ಟರು.
 ಕಥೆಗಾರ ಶರಣಬಸವ ಕೆ. ಗುಡದಿನ್ನಿ ಅವರು ಕಥಾರಚನೆ ಸಾಧ್ಯತೆ ಮತ್ತು ಸವಾಲುಗಳು ಕುರಿತು ಮಾತನಾಡಿದರು. ಸಾಹಿತಿ ಡಾ. ಮರೆಪ್ಪ ನಾಟೇಕಾರ ಕಲ್ಯಾಣ ಕರ್ನಾಟಕದ ಬರಹಗಳ ಬಗ್ಗೆ ಮಾತನಾಡಿದರು. ಖ್ಯಾತ ಕಥೆಗಾರ ಹಾಗೂ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಚಿದಾನಂದ ಸಾಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಥೆಗಾರ ಆನಂದ ಗುಬ್ಬಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
 ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ, ಕನಕಪ್ಪ ವಾಗನಗೇರಿ, ಮಹಾಂತೇಶ ಗೋನಾಳ, ವೆಂಕಟೇಶ ಸುರುಪುರ, ರಾಮಕೃಷ್ಣ ಕಟ್ಕಾವಲಿ, ಶಂಕರ ಹುಲಕಲ್, ಗೌಡಪ್ಪಗೌಡ ಹುಲಕಲ್, ಶರಣಗೌಡ ಚಂದಾಪುರ, ಮಾಳಪ್ಪ ಗುಂಡಳ್ಳಿ, ನಿಂಗಣ್ಣ ಹಯ್ಯಾಳ ಮುಂತಾದವರು ಉಪಸ್ಥಿತರಿದ್ದರು.