ಯುವಶಕ್ತಿ ಸದ್ಬಳಕೆಯಿಂದ ಸದೃಢ ರಾಷ್ಟ್ರ ನಿರ್ಮಾಣ

ಕಲಬುರಗಿ: ಆ.12:ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ತುಂಬಾ ಪ್ರಮುಖವಾಗಿದ್ದು, ಆದರೆ, ಪ್ರಸ್ತುತವಾಗಿ ಯುವಕರು ಅನೇಕ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಸಮಯ ಮತ್ತು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ, ಸಂಸ್ಕಾರ ನೀಡಿ ಅಮೂಲ್ಯವಾದ ಸಂಪತ್ತನ್ನಾಗಿಸಿ, ಅವರಲ್ಲಿರುವ ಶಕ್ತಿಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ, ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ನಗರದ ಖಾದ್ರಿ ಚೌಕ್‍ನಲ್ಲಿರುವ 'ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶನಿವಾರ ಜರುಗಿದ 'ಅಂತಾರಾಷ್ಟ್ರೀಯ ಯುವ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಯುವಕರು ಕೆಟ್ಟ ಚಟಗಳಿಗೆ ದಾಸರಾಗುವುದು ಬೇಡ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ವಿಷಯದ ಜ್ಞಾನ ಪಡೆದರೆ ಸಾಲದು. ಬದಲಿಗೆ ಪಡೆದ ಜ್ಞಾನವನ್ನು ಕಾರ್ಯರೂಪದಲ್ಲಿ ತರುವ ಕೌಶಲ್ಯಗಳನ್ನು ಅಳವಡಿಸಿಕೊಂಡರೆ, ಸ್ವಾವಲಂಬನೆಯುತವಾದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ನಿವೃತ್ತ ಕೃಷಿ ಅಧಿಕಾರ ಶಿವಯೋಗಪ್ಪ ಬಿರಾದಾರ, ಸಂಸ್ಥಯ ಸಿಬ್ಬಂದಿಗಳಾದ ಪ್ರಿಯಾಂಕಾ ದೊಡ್ಡಿಕೊಳ್ಳ, ಪಾಯಲ್ ಹಿಬಾರೆ, ಪ್ರಮುಖರಾದ ಪ್ರಿಯಾಂಕಾ ಹಿರೇಮಠ, ಭೂಮಿಕಾ ಕಸ್ತುರಲಾಲ್, ನಿಖಿಲ್ ಕಣ್ಣಿ, ಸೋಹೈಲ್ ಶೇಖ್, ಶ್ರೀಶೈಲ್ ಬಿರಾದಾರ ಹಾಗೂ ವಿದ್ಯಾರ್ಥಿಗಳಿದ್ದರು.