ಯುವಶಕ್ತಿಯ ಪ್ರತೀಕ ಚಿಂತನಾಶೀಲ ಮಹನೀಯರು

ಕೋಲಾರ,ಜ.೧೪: ಯುವ ಶಕ್ತಿಯ ಪ್ರತೀಕವಾಗಿದ್ದು, ಮೇದಾವಿ ಮತ್ತು ತತ್ವ ಜ್ಞಾನಿಯಾದ ವಿವೇಕಾನಂದರು ಸದಾ ಚಿಂತನಾಶೀಲತೆಯ ವ್ಯಕ್ತಿಯಾಗಿದ್ದು, ಅವರೇ ಯುವಕಗೆ ಆದರ್ಶ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ತಿಳಿಸಿದರು.
ನಗರ ಹೊರವಲಯದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಸೌಧದಲ್ಲಿ ಸ್ವಾಮಿ ವಿವೇಕಾನಂದರ ೧೫೮ನೇ ಜನ್ಮ ದಿನ ಮತ್ತು ರಾಷ್ಟೀಯ ಯುವ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಅವರ ನೆನಪಿನಲ್ಲಿ ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ರಾಮಕ್ರಿಷ್ಣ ಪರಮಹಂಸರವರ ಶಿಷ್ಯರಾದ ಸ್ವಾಮಿ ವಿವೇಕಾನಂದರು . ಭಾರತೀಯ ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವನ್ನು ಅತಿ ಕಡಿಮೆ ವಯಸ್ಸಿನಲ್ಲಿಯೇ ಪಡೆದಿದ್ದ ಅವರು ಭಾರತೀಯ ಧರ್ಮ ಮತ್ತು ಆಧ್ಯಾತ್ಮದ ಬಗ್ಗೆ ಅಪಾರವಾದ ಜ್ಞಾನ ಪಡೆದಿದ್ದರು ಎಂದರು.
ಭಾರತೀಯತೆ ಮತ್ತು ಸಹಬಾಳ್ವೆಯ ಬಗ್ಗೆ ಸಮಾಜಕ್ಕೆ ಅರ್ಥಪೂರ್ಣ ಸಂದೇಶ ನೀಡಿದ್ದು, ಧರ್ಮ ಸಮನ್ವಯ ಹಾಗೂ ಸರ್ವ ಧರ್ಮ ಗೌರವದ ಬಗ್ಗೆ ಪ್ರಪಂಚವೇ ಒಪ್ಪುವ ಸಂದೇಶ ನೀಡಿದ ಮಾಹಾನ್ ವ್ಯಕ್ತಿ ಎಂದು ತಿಳಿಸಿದರು.
ತಮ್ಮ ೩೦ನೇ ವಯಸ್ಸಿನಲ್ಲಿಯೇ ವಿಶ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ತುಂಬಾ ಅವಿಸ್ಮರಣೀಯ ಹಾಗೂ ಅವರು ನೀಡಿರುವ ಸಂದೇಶ ಮತ್ತು ವಿಚಾರಧಾರೆಗಳನ್ನು ಎಲ್ಲಾ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಬೆಂಗಳೂರು ಉತ್ತರ ವಿವಿ ಕುಲಸಚಿವ ಡಾ. ವೆಂಕಟೇಶ್ ಮೂರ್ತಿ ಮಾತನಾಡಿ, ವಿವೇಕಾನಂದರ ದೇಶಪ್ರೇಮಕ್ಕೆ ಸಾಟಿಯೇ ಇಲ್ಲ, ಅವರಲ್ಲಿ ಧರ್ಮ ಶ್ರದ್ಧೆ, ರಾಷ್ಟ್ರಾಭಕ್ತಿ ಅಪಾರವಾಗಿತ್ತು, ಅವರ ನಿಸ್ವಾರ್ಥತೆ ಇಡೀ ಸಮಾಜಕ್ಕೆ ಆದರ್ಶವಾಗಿದೆ ಎಂದು ತಿಳಿಸಿ ವಿವೇಕಾನಂದ ಜಯಂತಿಯ ಸಂದರ್ಭ ಮತ್ತು ಅವರ ವಿಚಾರಧಾರೆಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರು, ಕಛೇರಿ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.